ಸಿಡ್ನಿ(ಆಸ್ಟ್ರೇಲಿಯಾ):ಟಿ20 ವಿಶ್ವಕಪ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶರವೇಗದ ಬೌಲರ್ ಹ್ಯಾರೀಸ್ ರೌಫ್ಗೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದ್ದ ವಿರಾಟ್ ಕೊಹ್ಲಿ, ನೆದರ್ಲ್ಯಾಂಡ್ ಪಂದ್ಯದಲ್ಲೂ ಓವರ್ ಕವರ್ ಮೇಲೆ ಬಾಲ್ ತೇಲಿಸಿ ಹೊಡೆದ ಸಿಕ್ಸರ್ ಅಭಿಮಾನಿಗಳನ್ನು ಚಕಿತಗೊಳಿಸಿತು.
ಕ್ರಿಕೆಟ್ ಶಿಶು ಡಚ್ಚರ ವಿರುದ್ಧ ಬ್ಯಾಟಿಂಗ್ ಪರಾಕ್ರಮ ಮೆರೆದ ಚೇಸ್ ಮಾಸ್ಟರ್ 44 ಎಸೆತಗಳಲ್ಲಿ 62 ರನ್ ಚಚ್ಚಿದರು. ವಿಶ್ವಕಪ್ನಲ್ಲಿ ಸತತ 2 ನೇ ಅರ್ಧಶತಕ ಬಾರಿಸಿದ ಕೊಹ್ಲಿ ಇನಿಂಗ್ಸ್ನಲ್ಲಿ 2 ಸಿಕ್ಸರ್ಗಳಿದ್ದವು.
ಕೊಹ್ಲಿ ಸ್ಟನ್ನಿಂಗ್ ಸಿಕ್ಸರ್:ನೆದರ್ಲ್ಯಾಂಡ್ನ ಫ್ರೆಡ್ ಕ್ಲಾಸೆನ್ ಎಸೆದ 17ನೇ ಓವರ್‌ನಲ್ಲಿ ಕೊಹ್ಲಿ ಓವರ್ ಕವರ್ನಲ್ಲಿ ಖಾಲಿ ಜಾಗಕ್ಕೆ ಗುರಿಯಾಗಿ ಬೌಲ್ ಅನ್ನು ಬಲವಾಗಿ ಹೊಡೆದರು. ಅದು ನೇರವಾಗಿ ಬೌಂಡರಿ ಗೆರೆಯಾಚೆ ಹೋಗಿ ಬಿದ್ದಿತು. ಈ ಹೊಡೆತ ಕೊಹ್ಲಿಗೇ ಅಚ್ಚರಿ ತಂದಿದೆ. ಚೆಂಡು ನೋಡನೋಡುವಷ್ಟರಲ್ಲಿ ರಾಕೆಟ್ನಂತೆ ಗೆರೆ ದಾಟಿ ಬಿದ್ದಿತ್ತು.
ಕೊಹ್ಲಿಯ ಈ ಅದ್ಭುತ ಸಿಕ್ಸರ್ಗೆ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕರತಾಡನದ ಸದ್ದು ಮೇಳೈಸಿದರು. ಇಂತಹ ಹೊಡೆತಗಳನ್ನು ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುವಾಗ ಬಾರಿಸಿದ್ದ ನೆನಪು ಮರುಕಳಿಸಿತು.
ನಿಧಾನಗತಿಯಲ್ಲಿ ಬೌಲ್ ಮಾಡುತ್ತಿದ್ದ ಡಚ್ಚರ ಬೌಲಿಂಗ್ ಎದುರಿಸುವುದು ಭಾರತೀಯರಿಗೆ ಕಿರಿಕಿರಿ ಉಂಟು ಮಾಡಿತು. ಅರ್ಧಶತಕ ಸಿಡಿಸಿದ ಚೇಸ್ ಮಾಸ್ಟರ್ ಮೊದಲ ಬೌಂಡರಿ ಬಾರಿಸಲು 31 ಎಸೆತ ತೆಗೆದುಕೊಂಡರು. ಅದಾಗಲೇ ತಂಡ 10 ಓವರ್ ದಾಟಿತ್ತು. ಬಳಿಕ ಬ್ಯಾಟ್ಗೆ ಪಾಠ ಹೇಳಿದ ಕೊಹ್ಲಿ ಮುಂದಿನ 13 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಚಚ್ಚಿದರು. ಸೂರ್ಯಕುಮಾರ್ ಯಾದವ್ ಜೊತೆ ಸೇರಿ 48 ಎಸೆತಗಳಲ್ಲಿ 95 ರನ್ಗಳ ಬಿರುಸಿನ ಜೊತೆಯಾಟವಾಡಿದರು.
ಏಷ್ಯಾಕಪ್ ನಂತರ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಕಟ್ಟಿದ ಮೂರನೇ ದೊಡ್ಡ ಜೊತೆಯಾಟ ಇದಾಗಿದೆ. ಈ ಹಿಂದೆ ಹಾಂಗ್ಕಾಂಗ್ ವಿರುದ್ಧ 42 ಎಸೆತಗಳಲ್ಲಿ 98 ರನ್, ಆಸ್ಟ್ರೇಲಿಯಾ ವಿರುದ್ಧ 62 ಎಸೆತಗಳಲ್ಲಿ 104 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 42 ಎಸೆತಗಳಲ್ಲಿ 102 ರನ್ ಸಹಭಾಗಿತ್ವದ ಆಟವಾಡಿದ್ದರು.
ಇದನ್ನೂ ಓದಿ:ಒಂದು ಪಂದ್ಯ ಸಾಧನೆ ಹಲವು..: ನೆದರ್ಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ದಾಖಲೆ ವಿಕ್ರಮ