ಕೋಲ್ಕತ್ತಾ (ಪಶ್ಚಿಮ ಬಂಗಾಳ):ಜನ್ಮದಿನದಂದೇ ವಿರಾಟ್ ಕೊಹ್ಲಿ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಈಡನ್ಗಾರ್ಡನ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಶತಕ ದಾಖಲಿಸಿದ ವಿರಾಟ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಗಳಿಸಿದ 49ನೇ ಶತಕ ಇದಾಗಿದೆ. ಅವರು ಇನ್ನಿಂಗ್ಸ್ನಲ್ಲಿ 121 ಬಾಲ್ ಆಡಿ 10 ಬೌಂಡರಿಯಿಂದ 101 ರನ್ ಗಳಿಸಿದರು.
ದಿಗ್ಗಜ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ 49 ಶತಕ ಮಾಡಿದ್ದು ವಿಶ್ವ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಎಂಬ ದಾಖಲೆ ಆಗಿತ್ತು. ಈ ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ ಸಚಿನ್ ಜೊತೆಗೆ ಸೇರಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್ನಿಂದ ಇಷ್ಟು ಶತಕದ ದಾಖಲೆ ಮಾಡಿದ್ದರೆ, ವಿರಾಟ್ ಕೇವಲ 277 ಇನ್ನಿಂಗ್ಸ್ ಆಡಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.
ಜನ್ಮದಿನದಂದು ವಿಶೇಷ ಶತಕ: ವಿರಾಟ್ ಅವರ 49ನೇ ಶತಕಕ್ಕೆ ವಿಶ್ವ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕುಳಿತಿದ್ದರು. ಜನ್ಮದಿನವಾದ ಇಂದು ಅವರ ಬ್ಯಾಟ್ನಿಂದ ಈ ಶತಕ ಬರುವ ಬಗ್ಗೆ ಹೆಚ್ಚಿನವರ ನಿರೀಕ್ಷೆ ಇತ್ತು ಅದರಂತೆ ವಿರಾಟ್ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ್ದಲ್ಲದೇ, ಇದೇ ವಿಶ್ವಕಪ್ನಲ್ಲಿ ಮೂರು ಬಾರಿ ಶತಕದಂಚಿನಲ್ಲಿ ಎಡವಿದ್ದ ತಪ್ಪನ್ನು ಮರುಕಳಿಸದಂತೆ ನೋಡಿಕೊಂಡಿದ್ದಾರೆ. ರಾಸ್ ಟೇಲರ್, ಮಿಚೆಲ್ ಮಾರ್ಷ್ ನಂತರ ವಿಶ್ವಕಪ್ ಸಂದರ್ಭದಲ್ಲಿ ಜನ್ಮದಿನದಂದೇ ವಿರಾಟ್ ಕೊಹ್ಲಿ ಶತಕ ಗಳಿಸಿದ ಆಟಗಾರ ಆದರು. ಭರ್ಜರಿ ಶತಕದಿಂದ ವಿರಾಟ್ ಅಭಿಮಾನಿಗಳಿಗೆ ಸಂತಸವನ್ನು ತಂದಿದ್ದಾರೆ.