ಮುಂಬೈ:ಭಾರತದ ಅತ್ಯಂತ ಯಶಸ್ವಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ಕಳೆದ ಶನಿವಾರ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದರು. ಈ ಘಟನೆ ಬಳಿಕ ಅವರ ನೂರನೇ ಪಂದ್ಯದಲ್ಲಿ ನಾಯಕನಾಗಿ ಬೀಳ್ಕೊಡುಗೆ ಪಂದ್ಯವನ್ನಾಡುವುದಕ್ಕೆ ಬಿಸಿಸಿಐ ಆಫರ್ ನೀಡಿತ್ತು. ಆದ್ರೆ ಅದನ್ನ ವಿರಾಟ್ ನಯವಾಗಿ ತಿರಸ್ಕಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸೋಲುಕಂಡು ಸರಣಿ ಸೋಲಿನ ಮುಖಭಂಗ ಅನುಭವಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ 7 ವರ್ಷಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಮೂಲಕ ಭಾರತದಪರ ಅವರ ಎಲ್ಲಾ ಮಾದರಿಯ ನಾಯಕತ್ವ ಅಂತ್ಯಗೊಂಡಿತು. ಈಗಾಗಲೇ ಟಿ20ಗೆ ಅವರೇ ರಾಜೀನಾಮೆ ಸಲ್ಲಿಸಿದರೆ, ಏಕದಿನ ತಂಡದಿಂದ ಕೊಹ್ಲಿಯನ್ನು ಕೆಳಗಿಳಿಸಲಾಯಿತು.
ಕೆಲವು ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ತಮ್ಮ ರಾಜೀನಾಮೆ ನಿರ್ಧಾರವನ್ನು ಬಿಸಿಸಿಐಗೆ ತಿಳಿಸಿದ ಸಂದರ್ಭದಲ್ಲಿ ಮಂಡಳಿ ನಾಯಕನಾಗಿ ಬೀಳ್ಕೊಡುಗೆ ಪಂದ್ಯವನ್ನಾಡುವುದಕ್ಕೆ ಆಫರ್ ನೀಡಿತ್ತು. ಅಲ್ಲದೆ ಆ ಪಂದ್ಯ ಕೊಹ್ಲಿ ಪಾಲಿನ 100ನೇ ಟೆಸ್ಟ್ ಪಂದ್ಯವಾಗಿದ್ದರಿಂದ ವಿಶೇಷ ಮೈಲಿಗಲ್ಲಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲು ಬೋರ್ಡ್ ಕೊಹ್ಲಿಗೆ ತಿಳಿಸಿತ್ತು ಎನ್ನಲಾಗ್ತಿದೆ.