ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿಗೆ ದಾಖಲೆಗಳು ಮುಖ್ಯವಲ್ಲ. ಅವರು ಬ್ಯಾಟ್ ಬೀಸಿದರೆ ದಾಖಲೆಗಳು ತಾನಾಗಿಯೇ ಸೃಷ್ಟಿಯಾಗುತ್ತವೆ. ದಕ್ಷಿಣ ಆಫ್ರಿಕ ವಿರುದ್ಧದ 2 ನೇ ಟಿ20 ಪಂದ್ಯದಲ್ಲಿ ವಿರಾಟ್ ಭರ್ಜರಿ ಬ್ಯಾಟ್ ಬೀಸಿ 49 ರನ್ ಗಳಿಸಿದ್ದರು. ಫಿಫ್ಟಿಗೆ 1 ರನ್ ಅಗತ್ಯವಿದ್ದಾಗ ಕಾರ್ತಿಕ್ ಸ್ಟ್ರೈಕ್ ನೀಡಲು ಕೇಳಿದ ಮಾತನ್ನು ತಿರಸ್ಕರಿಸಿ ಭಾರತಕ್ಕಾಗಿ ಆಡಿ ಎಂದು ಹೇಳಿದ ವಿಡಿಯೋ ಭಾರೀ ವೈರಲ್ ಆಗಿದೆ.
71 ಅಂತಾರಾಷ್ಟ್ರೀಯ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಳಿಕ ಕ್ರಿಕೆಟ್ ಲೋಕದಲ್ಲಿಯೇ ಅತಿ ಹೆಚ್ಚು ರನ್ ಗಳಿಸಿದ 2 ನೇ ಆಟಗಾರ. ಹಲವು ಮೈಲಿಗಲ್ಲನ್ನು ನೆಟ್ಟಿರುವ ವಿರಾಟ್ಗೆ ದಾಖಲೆಗಳು ಹೊಸದಲ್ಲ. ವೈಯಕ್ತಿಕ ಆಟಕ್ಕಿಂತ ತಂಡಕ್ಕಾಗಿ ಆಡಬೇಕೆಂಬ ಬದ್ಧತೆ ಈ ಹಿರಿಯ ಕ್ರಿಕೆಟಿಗನಿಗಿದೆ ಎಂಬುದು ಗುವಾಹಟಿಯಲ್ಲಿ ನಡೆದ ಹರಿಣಗಳ ವಿರುದ್ಧದ ಪಂದ್ಯದಲ್ಲಿ ಸಾಬೀತಾಯಿತು.
ವಿರಾಟ್ ಕೊಹ್ಲಿ ಬಿರುಸಾದ ಬ್ಯಾಟಿಂಗ್ಗೆ 28 ಎಸೆತಗಳಲ್ಲಿ 49 ರನ್ಗಳು ದಾಖಲಾಗಿದ್ದವು. ಇನಿಂಗ್ಸ್ ಮುಗಿಯಲು ಒಂದು ಓವರ್ ಬಾಕಿ ಇತ್ತು. ಕೊಹ್ಲಿ ಅರ್ಧಶತಕಕ್ಕೆ ಬೇಕಿದ್ದುದು ಕೂಡ ಒಂದು ರನ್. ಈ ವೇಳೆ ಇನ್ನೊಂದು ತುದಿಯಲ್ಲಿದ್ದ ಫಿನಿಶರ್ ಖ್ಯಾತಿಯ ದಿನೇಶ್ ಕಾರ್ತಿಕ್. ಕೊನೆಯ ಓವರ್ ಆಡಿದ ದಿನೇಶ್ ಮೊದಲ ನಾಲ್ಕು ಎಸೆತಗಳಲ್ಲಿ 1 ಸಿಕ್ಸರ್, 1 ಬೌಂಡರಿ ಚಚ್ಚಿದರು. ಇದಕ್ಕೆ ವಿರಾಟ್ ಚಪ್ಪಾಳೆ ತಟ್ಟಿ ಭೇಷ್ ಎಂದರು.