ಕೇಪ್ಟೌನ್(ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಸರಣಿ ಕೈಚೆಲ್ಲಿದೆ. ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತದ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರಾ ಹಾಗೂ ಅಜಿಂಕ್ಯ ರಹಾನೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್ ಪಂದ್ಯಗಳಿಂದ ರಹಾನೆ 136ರನ್ ಗಳಿಸಿದ್ರೆ, ಪೂಜಾರಾ 124ರನ್ಗಳಿಸಿದ್ದಾರೆ. ಮೂರು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿರುವ ರಹಾನೆ, ಪೂಜಾರಾ ಟೆಸ್ಟ್ ಭವಿಷ್ಯದ ಬಗ್ಗೆ ಚರ್ಚಿಸುವುದು ನನ್ನ ಕೆಲಸವಲ್ಲ ಎಂದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ. ಸರಣಿ ಮುಗಿದ ಬಳಿಕ ಮಾತನಾಡಿರುವ ಅವರು, ಕಳೆದ ಕೆಲ ವರ್ಷಗಳಿಂದ ಭಾರತಕ್ಕಾಗಿ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅನೇಕ ನಿರ್ಣಾಯಕ ಪಂದ್ಯಗಳಲ್ಲಿ ಭಾರತಕ್ಕೆ ಅತ್ಯುತ್ತಮವಾದ ಕೊಡುಗೆ ನೀಡಿದ್ದಾರೆ ಎಂದರು.
ದಕ್ಷಿಣ ಆಫ್ರಿಕಾದಲ್ಲಿ ರಹಾನೆ-ಪೂಜಾರಾ ಕಳಪೆ ಬ್ಯಾಟಿಂಗ್ ಕೇಪ್ಟೌನ್ ಸೋಲಿಗೆ ಬ್ಯಾಟರ್ಗಳ ವೈಫಲ್ಯವೇ ಕಾರಣ ಎಂದು ಒಪ್ಪಿಕೊಂಡಿರುವ ವಿರಾಟ್ ಕೊಹ್ಲಿ, ಭವಿಷ್ಯದಲ್ಲಿ ಏನಾಗಬಹುದು ಎಂಬುದರ ಕುರಿತು ನಾನಿಲ್ಲಿ ಮಾತನಾಡಲು ಸಾಧ್ಯವಿಲ್ಲ. ಆಯ್ಕೆದಾರರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಅವರೊಂದಿಗೆ ಮಾತನಾಡಬೇಕು ಎಂದರು.
ಇದನ್ನೂ ಓದಿ:30-45 ನಿಮಿಷಗಳ ಕೆಟ್ಟ ಬ್ಯಾಟಿಂಗ್ ಪ್ರದರ್ಶನದಿಂದ ಸರಣಿ ಕೈತಪ್ಪಿತು: ಕೊಹ್ಲಿ
ಈಗಾಗಲೇ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಚೇತೇಶ್ವರ್, ರಹಾನೆ ಯಾವ ರೀತಿಯ ಆಟಗಾರರು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಏನು ಮಾಡಿದ್ದಾರೆ ಎಂಬುದು ತಿಳಿದಿದೆ. ಅವರಿಗೆ ನನ್ನ ಬೆಂಬಲ ಮುಂದುವರೆಯಲಿದೆ ಎಂದರು. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಮೊದಲ ಪಂದ್ಯ ಗೆದ್ದಿದ್ದ ಟೀಂ ಇಂಡಿಯಾ ನಂತರದ ಎರಡು ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಸರಣಿ ಕೈಚೆಲ್ಲಿದೆ.