ಆಸ್ಟ್ರೇಲಿಯಾ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ಬ್ಯಾಟರ್‌ಗಳು ಮುಗ್ಗರಿಸಿದ್ದಾರೆ. ಎರಡನೇ ದಿನ ಬ್ಯಾಟಿಂಗ್ಗೆ ಇಳಿದ ಭಾರತ ದಿನದಾಟದ ಅಂತ್ಯಕ್ಕೆ 151 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿತು. ಇದೀಗ 3ನೇ ದಿನದಾಟ ನಡೆಯುತ್ತಿದ್ದು ಕ್ರೀಸ್ನಲ್ಲಿ ಅನುಭವಿ ಬ್ಯಾಟರ್ ಅಜಿಂಕ್ಯಾ ರಹಾನೆ ಇದ್ದಾರೆ.
ಭಾರತದ ಬ್ಯಾಟರ್‌ಗಳು ತರಗಲೆಗಳಂತೆ ವಿಕೆಟ್ ಒಪ್ಪಿಸಿದ ನಂತರ ಉಪಹಾರ ಸೇವನೆ ಮಾಡುತ್ತಿರುವ ಫೋಟೋಗಳು ಟ್ವಿಟರ್ನಲ್ಲಿ ಹರಿದಾಡುತ್ತಿದ್ದು ಟೀಕೆಗಳಿಗೆ ಗುರಿಯಾಗಿವೆ. ವಿಶೇಷವಾಗಿ ವಿರಾಟ್ ಕೊಹ್ಲಿ, ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಜೊತೆಯಲ್ಲಿ ನಗುತ್ತಾ ಮಾತನಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಐಪಿಎಲ್ನಲ್ಲಿ ಫ್ರಾಂಚೈಸಿಗಳಿಗೆ ಉತ್ತಮ ಪ್ರದರ್ಶನ ನೀಡುತ್ತಾರೆ, ಆದರೆ ರಾಷ್ಟ್ರೀಯ ತಂಡದಲ್ಲಿ ಸ್ಕೋರ್ ಮಾಡಲು ಪರದಾಡುತ್ತಾರೆ ಎಂದು ಕ್ಯಾಪ್ಶನ್ಗಳನ್ನು ಬರೆದು ವ್ಯಂಗ್ಯವಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಹೇಳಿದ್ದೇನು?: ಇದಕ್ಕೆ ಉತ್ತರವೆಂಬಂತೆ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿಯೊಂದನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ಅಮೆರಿಕನ್ ಲೇಖಕ ಮಾರ್ಕ್ ಮ್ಯಾನ್ಸನ್ ಅವರ, "ಇತರ ಜನರ ಅಭಿಪ್ರಾಯದ ಸೆರೆಮನೆಯಿಂದ ನಿಮ್ಮನ್ನು ಮುಕ್ತಗೊಳಿಸಲು ನೀವು ಇಷ್ಟಪಡದಿರುವ ಸಾಮರ್ಥ್ಯವನ್ನು ಉತ್ತಮವಾಗಿ ಬೆಳೆಸಿಕೊಳ್ಳಬೇಕು" ಎಂಬ ಹೇಳಿಕೆ ಉಲ್ಲೇಖಿಸಿದ್ದಾರೆ.
ಬ್ಯಾಟಿಂಗ್ನಲ್ಲಿ ಎಡವಿದ ಭಾರತ: ಮೊದಲ ದಿನ ಭಾರತ ಪ್ರಥಮ ಅವಧಿಯಲ್ಲಿ ಎರಡು ವಿಕೆಟ್ ಪಡೆದರೆ, ಎರಡನೇ ಸೆಷನ್ನಲ್ಲಿ 1 ವಿಕೆಟ್ ಮಾತ್ರ ಕಬಳಿಸಿತು. ನಂತರ ಆಸ್ಟ್ರೇಲಿಯಾದ ಹೆಡ್ ಮತ್ತು ಸ್ಮಿತ್ ಬ್ಯಾಟಿಂಗ್ ಪಾರಮ್ಯ ಮೆರೆದರು. ಇದರಿಂದ ಬೃಹತ್ ಮೊತ್ತದತ್ತ ಆಸಿಸ್ ಮುಖ ಮಾಡಿತು. ಹೆಡ್ 90 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ದಾಖಲೆ ಬರೆದರು.