ಹೈದರಾಬಾದ್: ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಹೋಲಿಕೆಗೊಳಗಾಗುವ ಆಟಗಾರರೆಂದರೆ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಆಟಗಾರ ಬಾಬರ್ ಅಜಮ್. ಏಕದಿನ ಐಸಿಸಿ ಶ್ರೇಯಾಂಕದ ನಂ 1 ಆಟಗಾರ ಬಾಬರ್ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ ಹಳೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಟ್ವಿಟರ್ನಲ್ಲಿ ವಿರಾಟ್ ಕೊಹ್ಲಿಯ ಸಂದರ್ಶನದ ಒಂದು ತುಣುಕನ್ನು ಹಂಚಿಕೊಂಡಿದೆ.
ಈ ತುಣುಕಿನಲ್ಲಿ ವಿರಾಟ್ ಏಷ್ಯಾಕಪ್ ಸಂದರ್ಭದಲ್ಲಿ ಬಾಬರ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಪಾಕ್ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಅವರೊಂದಿಗಿನ ತನ್ನ ಮೊದಲ ಭೇಟಿಯ ನೆನಪು ಹೇಳಿದ್ದರು. ಎದುರಾಳಿ ತಂಡದ ಆಟಗಾರರನ್ನು ಮುಕ್ತ ಕಂಠದಿಂದ ಹೊಗಳಿದ್ದರು.
"2019ರ ಏಕದಿನ ವಿಶ್ವಕಪ್ ವೇಳೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದ ನಂತರ ನಾನು ಬಾಬರ್ ಅವರನ್ನು ಮಾತನಾಡಿಸಿದ್ದೆ. 19 ವರ್ಷದೊಳಗಿನ ವಿಶ್ವಕಪ್ನಲ್ಲಿ ಇಮಾದ್ ವಾಸಿಂ ಅವರನ್ನು ಕಂಡಿದ್ದೆ. ಆಗ ಅವರು ಬಾಬರ್ ಮಾತನಾಡಲು ಇಚ್ಛಿಸುತ್ತಾರೆ ಎಂದು ತಿಳಿಸಿದರು. ಅದರಂತೆ ನಾವು ಸಂದರ್ಶಿಸಿದ್ದೆವು. ನಾವು ಕುಳಿತು ಆಟದ ಬಗ್ಗೆ ಮಾತನಾಡಿದ್ದೆವು. ಮೊದಲ ದಿನದಿಂದ ನಾನು ಅವರಿಂದ ಸಾಕಷ್ಟು ಗೌರವ ಕಂಡಿದ್ದೇನೆ. ಅದು ಬದಲಾಗಿಲ್ಲ. ಬಾಬರ್ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಐಸಿಸಿ ಶ್ರೇಯಾಂಕದಲ್ಲೂ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಅವರೊಬ್ಬ ಉತ್ತಮ ಬ್ಯಾಟರ್. ಅವರ ಆಟವನ್ನು ನೋಡಲು ನಾನು ಇಷ್ಟಪಡುತ್ತೇನೆ" ಎಂದಿದ್ದರು.