ನವದೆಹಲಿ:ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಇದೀಗ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅವರ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಲಿದೆ. ಟಿ-20 ಕ್ರಿಕೆಟ್‌ನಲ್ಲಿ ಈವರೆಗೂ 11,994 ರನ್ ಗಳಿಸಿದ್ದು, ಇಂದು ನಡೆಯುವ ಮೂರನೇ ಮತ್ತು ಕೊನೆಯ ಟಿ-20 ಪಂದ್ಯದಲ್ಲಿ 6 ರನ್ ಗಳಿಸಿದರೆ ಚುಟುಕು ಮಾದರಿಯಲ್ಲಿ ವೇಗವಾಗಿ 12 ಸಾವಿರ ರನ್ ಗಳಿಸಿದ ದಾಖಲೆಯನ್ನು ವಿರಾಟ್ ಬರೆಯಲಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 116 ಪಂದ್ಯಗಳಲ್ಲಿ 108 ಇನ್ನಿಂಗ್ಸ್ ಆಡಿರುವ ಕೊಹ್ಲಿ 4037 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ 237 ಪಂದ್ಯಗಳನ್ನಾಡಿದ್ದು, 229 ಇನ್ನಿಂಗ್ಸ್‌ಗಳಲ್ಲಿ 7263 ರನ್ ಬಾರಿಸಿದ್ದಾರೆ. ಒಟ್ಟಾರೆಯಾಗಿ ಅವರು 375 ಪಂದ್ಯಗಳಲ್ಲಿ 11,994 ರನ್ ಗಳಿಸಿದ್ದಾರೆ. ಇನ್ನು ಆರು ರನ್ ಗಳಿಸಿದಲ್ಲಿ 12 ಸಾವಿರ ರನ್ ಪೂರೈಸಲಿದ್ದಾರೆ. ಜೊತೆಗೆ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆಯ್ನೂ ಕೊಹ್ಲಿ ತಮ್ಮ ಹೆಸರಿಗೆ ಬರೆದುಕೊಳ್ಳಲಿದ್ದಾರೆ.
12 ಸಾವಿರ ರನ್ ಬಾರಿಸಿದ ಕ್ರಿಕೆಟಿಗರು:ಚುಟುಕು ಕ್ರಿಕೆಟ್ನ ಅನಭಿಷಿಕ್ತ ದೊರೆ, ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅಂತಾರಾಷ್ಟ್ರೀಯ, ದೇಶಿ ಸೇರಿದಂತೆ 463 ಟಿ20 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 14,562 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಆ ನಂತರ ಪಾಕಿಸ್ತಾನದ ಶೋಯೆಬ್ ಮಲಿಕ್ 525 ಪಂದ್ಯಗಳಲ್ಲಿ 12,993 ರನ್, ಇನ್ನೊಬ್ಬ ಕೆರೆಬಿಯನ್ ಆಟಗಾರ ಕೀರಾನ್ ಪೊಲಾರ್ಡ್ 639 ಪಂದ್ಯಗಳಲ್ಲಿ 12,430 ರನ್ ಗಳಿಸಿದ್ದಾರೆ. ಇದೀಗ ಕೊಹ್ಲಿ 12,000 ರನ್ ಪೂರೈಸಿದ ನಾಲ್ಕನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ.
ಬ್ಯಾಟಿಂಕ್ ಕಿಂಗ್ ಎಂದೇ ಕರೆಯಿಸಿಕೊಳ್ಳುವ ಹಿರಿಯ ಕ್ರಿಕೆಟಿಗ ಕೊಹ್ಲಿ, 14 ತಿಂಗಳ ನಂತರ ಟಿ-20 ಮಾದರಿಯ ಕ್ರಿಕೆಟ್‌ಗೆ ಮರಳಿದ್ದಾರೆ. ಇದಕ್ಕೂ ಮೊದಲು ಅವರು 2022 ರ ಟಿ 20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ಕ್ರಿಕೆಟ್ನಿಂದ ದೂರವುಳಿದಿದ್ದರು. ಇದೀಗ ಮುಂಬರುವ ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಮೊದಲ ಪಂದ್ಯದಿಂದ ಅವರು ಹೊರಗುಳಿದಿದ್ದರು. ಎರಡನೇ ಟಿ20 ಪಂದ್ಯದಲ್ಲಿ ಕೊಹ್ಲಿ 16 ಎಸೆತಗಳಲ್ಲಿ 29 ರನ್‌ಗಳನ್ನು ಗಳಿಸಿದ್ದರು.
ಇದನ್ನೂ ಓದಿ:ಟಿ20: ಒಂದು ಪಂದ್ಯ ಗೆದ್ದರೆ ಪಾಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದೆ ಭಾರತ