ಬೆಂಗಳೂರು: ಭಾರತ ತಂಡದ ಸ್ಟಾರ್ ಆಟಗಾರ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿ ಅವರು 'ಸಾರ್ವಕಾಲಿಕ ಶ್ರೇಷ್ಠ' ಎಂದು ಪರಿಗಣಿಸುವ ಇಬ್ಬರು ಬ್ಯಾಟರ್‌ಗಳನ್ನು ಬುಧವಾರ ಬಹಿರಂಗಪಡಿಸಿದ್ದಾರೆ. ಆ ಇಬ್ಬರು ಆಟಗಾರರು ಕ್ರಿಕೆಟ್‌ನ ಚಿತ್ರಣವನ್ನೇ ಬದಲಾಯಿಸಿದ್ದರು ಎಂದು ಹೇಳಿದ್ದಾರೆ.
"ನಾನು ಯಾವಾಗಲೂ ಎರಡು ಹೆಸರುಗಳನ್ನು ತೆಗೆದುಕೊಂಡಿದ್ದೇನೆ, ಸಚಿನ್ ತೆಂಡೂಲ್ಕರ್ ಮತ್ತು ಸರ್ ವಿವ್ ರಿಚರ್ಡ್ಸ್ ಕ್ರಿಕೆಟ್‌ನ ಗೋಟ್‌ಗಳು. ಸಚಿನ್ ನನ್ನ ಹೀರೋ. ಇವರಿಬ್ಬರು ತಮ್ಮ ಪೀಳಿಗೆಯಲ್ಲಿ ಬ್ಯಾಟಿಂಗ್ ಕ್ರಾಂತಿಯನ್ನು ಮಾಡಿದ್ದಾರೆ ಮತ್ತು ಕ್ರಿಕೆಟ್‌ನ ಡೈನಾಮಿಕ್ಸ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಅದಕ್ಕಾಗಿಯೇ ಅವರಿಬ್ಬರನ್ನು ಶ್ರೇಷ್ಠ ಎಂದು ನಾನು ಭಾವಿಸುತ್ತೇನೆ" ಎಂದು ಆರ್‌ಸಿಬಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ವಿರಾಟ್ ಹೇಳಿದ್ದಾರೆ.
ಸಚಿನ್ ದಾಖಲೆ: ಸಚಿನ್ ಮತ್ತು ವಿವ್ ಇಬ್ಬರೂ ವಿರಾಟ್ ಹೇಳುವಂತೆ ಕ್ರಿಕೆಟ್‌ನ ದಿಗ್ಗಜರಾಗಿದ್ದಾರೆ. 664 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಚಿನ್ 100 ಶತಕ ಮತ್ತು 164 ಅರ್ಧಶತಕಗಳೊಂದಿಗೆ 48.52 ಸರಾಸರಿಯಲ್ಲಿ 34,357 ರನ್ ಗಳಿಸಿದ್ದಾರೆ. ಅವರ ವೈಯುಕ್ತಿಕ ಉತ್ತಮ ಸ್ಕೋರ್ 248*ಆಗಿದೆ. ಸಚಿನ್ ಹೆಸರಿನಲ್ಲಿ ಇಲ್ಲದ ದಾಖಲೆಯೇ ಇಲ್ಲ ಎಂಬಂತಾಗಿದೆ. ಹಲವಾರು ಕ್ರಿಕೆಟ್‌ನ ದಾಖಲೆಗೆ ಮೊದಲಿಗರು ಸಹ ಹೌದು. ಅವರ ಕೆಲ ಗುರುತುಗಳನ್ನು ಯಾರಿಂದಲೂ ಮೀರಲು ಸಾಧ್ಯವಿಲ್ಲ.
ವಿವ್ ರಿಚರ್ಡ್ಸ್ ದಾಖಲೆ: ವಿವ್ ತನ್ನ ಕಾಲದ ಅತ್ಯಂತ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಸಹ ಹೊಂದಿದ್ದರು. ಅವರು 1975 ಮತ್ತು 1979 ಕ್ರಿಕೆಟ್ ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಭಾಗವಾಗಿದ್ದರು. ಅವರು 121 ಟೆಸ್ಟ್‌ಗಳಲ್ಲಿ 50.23 ಸರಾಸರಿಯಲ್ಲಿ 24 ಶತಕಗಳು ಮತ್ತು 45 ಅರ್ಧಶತಕಗಳೊಂದಿಗೆ 8,540 ರನ್ ಗಳಿಸಿದರು. ಅವರು 187 ಏಕದಿನ ಪಂದ್ಯಗಳಲ್ಲಿ 47.00 ಸರಾಸರಿಯಲ್ಲಿ 11 ಶತಕಗಳು ಮತ್ತು 45 ಅರ್ಧಶತಕಗಳೊಂದಿಗೆ 6,721 ರನ್ ಗಳಿಸಿದರು.
ನಿವೃತ್ತ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಮತ್ತು ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರೊಂದಿಗೆ ಟೇಬಲ್ ಹಂಚಿಕೊಂಡರೆ ನೀವು ಏನು ಹೇಳುತ್ತೀರಿ ಎಂದು ಕೇಳಿದಾಗ, ವಿರಾಟ್ ಅವರು ಇಬ್ಬರೂ ಮಾತನಾಡುವುದನ್ನು ಕೇಳುತ್ತೇನೆ ಎಂದು ಹೇಳಿದ್ದಾರೆ. "ನಾನು ಮೌನವಾಗಿರುತ್ತೇನೆ ಮತ್ತು ಅವರಿಬ್ಬರ ಮಾತನ್ನು ಕೇಳುತ್ತೇನೆ. ಆ ಸಂಭಾಷಣೆಗೆ ನನ್ನಲ್ಲಿ ಹೆಚ್ಚಿನ ಕೊಡುಗೆ ಇಲ್ಲ. ಇದು ಎಲ್ಲವನ್ನೂ ನೆನೆಸುವುದು, ಕ್ರೀಡಾ ಇತಿಹಾಸದ ಇಬ್ಬರು ಶ್ರೇಷ್ಠ ಕ್ರೀಡಾಪಟುಗಳನ್ನು ಆಲಿಸುವುದು" ಉತ್ತಮ ಎಂದಿದ್ದಾರೆ.