ದುಬೈ: ಮಹೇಂದ್ರ ಸಿಂಗ್ ಧೋನಿ ಬಳಿಕ 5 ವರ್ಷಗಳ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ ಸೋಮವಾರ ನಮೀಬಿಯಾ ವಿರುದ್ಧ ಜಯ ಸಾಧಿಸಿ ತಮ್ಮ ಚುಟುಕು ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
2021ರ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಕ್ರಿಕೆಟ್ ತಜ್ಞರ ಹಾಟ್ ಫೇವರೇಟ್ ಆಗಿದ್ದ ಭಾರತ ತಂಡ ತನ್ನ ಆರಂಭದ 2 ಪಂದ್ಯಗಳಲ್ಲಿ ಸೋಲುಕಂಡು ನಿರಾಶೆಯನುಭಿಸಿತು. ನಂತರ ಸತತ ಮೂರು ಪಂದ್ಯಗಳನ್ನ ಗೆದ್ದರಾದರೂ, ಅವರು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದವು. ಸತತ 9 ವರ್ಷಗಳ ನಡೆದಿದ್ದ ಎಲ್ಲಾ ಐಸಿಸಿ ಟೂರ್ನಮೆಂಟ್ಗಳಲ್ಲಿ ಕನಿಷ್ಠ ಸೆಮಿಫೈನಲ್ ಪ್ರವೇಶಿಸಲು ಯಶಸ್ವಿಯಾಗಿದ್ದ ಭಾರತ ತಂಡ ಚುಟುಕು ವಿಶ್ವಕಪ್ನಲ್ಲಿ ಲೀಗ್ನಲ್ಲಿ ಗುಂಪು ಹಂತದಲ್ಲೇ ಸೋತು ಹೊರಬಿದ್ದಿದೆ.
ಇನ್ನು ಗುಂಪು ಹಂತದಲ್ಲಿ ಭಾರತ ಹೊರಬಿದ್ದ ನೋವು ಒಂದು ಕಡೆಯಾದರೆ, ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಆಕ್ರಮಣಕಾರಿ ಮನೋಭಾವದಿಂದ ಹೆಸರಾಗಿದ್ದ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನ ನಾಯಕತ್ವದಿಂದ ಯಾವುದೇ ಟ್ರೋಫಿಯಿಲ್ಲದೆ ಕೆಳಗಿಳಿದಿದ್ದಾರೆ. ಈಗಾಗಲೇ ಐಪಿಎಲ್ನಲ್ಲೂ ಆರ್ಸಿಬಿ ನಾಯಕತ್ವ ತ್ಯಜಿಸಿದ್ದ ವಿರಾಟ್ ಇನ್ಮುಂದೆ ಹೊಡಿಬಡಿ ಕ್ರಿಕೆಟ್ನಲ್ಲಿ ಬ್ಯಾಟರ್ ಆಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಅವರ ಭಾವಾದ್ವೇಗವನ್ನು ಅಭಿಮಾನಿಗಳು ಕಾಣಲು ಸಾಧ್ಯವಿಲ್ಲ.