ಅಹಮದಾಬಾದ್ (ಗುಜರಾತ್): ಭಾರತ-ಪಾಕಿಸ್ತಾನ ತಂಡಗಳ ನಡುವಿನ ಪ್ರಾದೇಶಿಕ ಮತ್ತು ರಾಜಕೀಯ ಬಿಕ್ಕಟ್ಟು ಕ್ರೀಡೆಗಳ ಮೇಲೂ ಪರಿಣಾಮ ಬೀರುತ್ತವೆ. ಇದರಿಂದಾಗಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ಸಾಂಪ್ರದಾಯಿಕ ಬದ್ಧ ಎದುರಾಳಿಗಳ ಮುಖಾಮುಖಿ ಎಂದೇ ಕರೆಯಲಾಗುತ್ತದೆ. ಪಂದ್ಯವನ್ನು ಉಭಯ ದೇಶಗಳ ಜನರು ಯುದ್ಧದ ರೀತಿಯಲ್ಲಿ ನೋಡಿದರೂ ಆಟಗಾರರ ನಡುವೆ ಕ್ರೀಡಾ ಸ್ಫೂರ್ತಿ ಕಂಡುಬರುತ್ತದೆ. ಮೈದಾನದಲ್ಲಿ ಪಂದ್ಯದ ವೇಳೆ ಬದ್ಧ ವೈರಿಗಳಂತೆ ಸೆಣಸಿದರೂ ನಂತರ ಭುಜಕ್ಕೆ ಭುಜ ತಗುಲಿಸಿ ಸೋಲು-ಗೆಲುವು ಆಟದ ಭಾಗ ಎಂಬಂತೆ ನಡೆದುಕೊಳ್ಳುತ್ತಾರೆ.
ನಿನ್ನೆ (ಶನಿವಾರ) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯ ರೋಚಕವಾಗಿತ್ತು. ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ 8ನೇ ವಿಜಯ ದಾಖಲಿಸಿತು.
ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡು 191 ರನ್ಗಳಿಗೆ ಸರ್ವಪತನ ಕಂಡಿತು. ನಂತರ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 31 ಓವರ್‌ಗಳಲ್ಲಿ ಗುರಿ ಭೇದಿಸಿ ಜಯಭೇರಿ ಬಾರಿಸಿತು. ಈ ಸೋಲಿನಿಂದ ಎರಡು ಪಂದ್ಯಗಳನ್ನು ಗೆದ್ದಿದ್ದ ಪಾಕಿಸ್ತಾನದ ಅಜೇಯ ಓಟಕ್ಕೆ ಬ್ರೇಕ್ ಬಿತ್ತು. ಭಾರತ ಹ್ಯಾಟ್ರಿಕ್ ಗೆಲುವು ದಾಖಲಿಸಿ ಪ್ಲೇ ಆಫ್ ಹಾದಿ ಸುಗಮಗೊಳಿಸಿತು.