ಹೈದರಾಬಾದ್:15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲು ಕೇವಲ ಎರಡು ದಿನ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನ ಸ್ಥಾನದಿಂದ ಮಹೇಂದ್ರ ಸಿಂಗ್ ಧೋನಿ ಹೊರಬಂದಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ ಹೆಗಲಿಗೆ ಈ ಜವಾಬ್ದಾರಿ ನೀಡಲಾಗಿದೆ. ಧೋನಿ ನಾಯಕತ್ವದಿಂದ ಕೆಳಗಿಳಿಯುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
'ಹಳದಿ ಜೆರ್ಸಿಯಲ್ಲಿ ಲೆಜೆಂಡರಿ ನಾಯಕತ್ವ ಅಂತ್ಯವಾಗಿದೆ, ಅಭಿಮಾನಿಗಳು ಎಂದಿಗೂ ಮರೆಯಲಾಗದ ಅಧ್ಯಾಯ, ಯಾವಾಗಲೂ ನಾನು ಅವರನ್ನ ಗೌರವಿಸುತ್ತೇನೆ' ಎಂದು ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ವಿರಾಟ್, ಈಗಾಗಲೇ ತಮ್ಮ ನಾಯಕತ್ವ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅವರ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಫಾಫ್ ಡುಪ್ಲೆಸಿಸ್ ಆಯ್ಕೆಯಾಗಿದ್ದಾರೆ.
ಚೆನ್ನೈ ತಂಡದ ನಾಯಕನಾಗಿ ಆಯ್ಕೆಯಾಗಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಪ್ರತಿಕ್ರಿಯೆ ನೀಡಿದ್ದು, 'ನಾಯಕನಾಗಿರುವುದಕ್ಕೆ ಒಳ್ಳೆಯ ಭಾವನೆ ಇದೆ. ಆದರೆ, ಈ ಸಂದರ್ಭದಲ್ಲಿ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಮಾಹಿ ಭಾಯ್ ಈಗಾಗಲೇ ತಂಡದಲ್ಲಿ ದೊಡ್ಡ ಪರಂಪರೆ ಉಳಿಸಿಕೊಂಡು ಬಂದಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ. ಧೋನಿ ತಂಡದಲ್ಲಿರುವ ಕಾರಣ ನಾನು ಹೆಚ್ಚು ಚಿಂತಿಸಬೇಕಾಗಿಲ್ಲ. ಮಹಿ ಯಾವಾಗಲೂ ಬಾಸ್ ಆಗಿರುತ್ತಾರೆ. ನನಗೆ ಏನೇ ಪ್ರಶ್ನೆಗಳು ಉದ್ಭವವಾದ್ರೂ, ಅವರನ್ನು ಕೇಳುತ್ತೇನೆ. ಧೋನಿ ತಂಡದೊಂದಿಗೆ ಇದ್ದಾರೆ, ಇರುತ್ತಾರೆ. ನಿಮ್ಮ ಹಾರೈಕೆ ಮತ್ತು ಪ್ರೀತಿಗೆ ಧನ್ಯವಾದಗಳು. ನಮ್ಮನ್ನು ಬೆಂಬಲಿಸಿ' ಎಂದಿದ್ದಾರೆ.