ಗಾಂಧಿನಗರ( ಗುಜರಾತ್): ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಭಾರತದಲ್ಲಿ 4,000 ಟೆಸ್ಟ್ ರನ್‌ಗಳನ್ನು ಪೂರೈಸುವ ಮೂಲಕ ಬೃಹತ್ ಸಾಧನೆಯನ್ನು ಮಾಡಿದರು. ಅವರು ಕ್ರೀಸ್‌ಗೆ ಬಂದಾಗ ನಾಲ್ಕು ಸಹಸ್ರ ರನ್ ಲ್ಯಾಂಡ್‌ಮಾರ್ಕ್‌ನಿಂದ 44 ರನ್‌ಗಳ ದೂರದಲ್ಲಿದ್ದರು. ಮೂರನೇ ದಿನದಾಟದ ಅಂತ್ಯಕ್ಕೆ 59* ರನ್ ಗಳಿಸಿ ವಿರಾಟ್ ಆಡುತ್ತಿದ್ದಾರೆ. ಈ ಸರಣಿಯ 2ನೇ ಟೆಸ್ಟ್‌ನಲ್ಲಿ ರನ್ ಮಷಿನ್ ವಿರಾಟ್ 25,000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರೈಸಿದರು.
5ನೇ ಭಾರತೀಯ:ಸಚಿನ್ ತೆಂಡೂಲ್ಕರ್ (7,216), ರಾಹುಲ್ ದ್ರಾವಿಡ್ (5,598), ಸುನಿಲ್ ಗವಾಸ್ಕರ್ (5,067) ಮತ್ತು ವೀರೇಂದ್ರ ಸೆಹ್ವಾಗ್ (4,656) ನಂತರ ತವರಿನಲ್ಲಿ 4000 ರನ್ ಗಡಿ ದಾಟಿದ ಭಾರತದ ಐದನೇ ಆಟಗಾರ ವಿರಾಟ್ ಆಗಿದ್ದಾರೆ. ವಿರಾಟ್ ಕೊಹ್ಲಿ ಕೇವಲ 77 ಇನ್ನಿಂಗ್ಸ್ಗಳಿಂದ ಈ ದಾಖಲೆ ಬರೆದಿದ್ದಾರೆ. ಈ ಹಿಂದ ಗವಾಸ್ಕರ್ 87 ಮತ್ತು ದ್ರಾವಿಡ್ 88 ಇನ್ನಿಂಗ್ಸ್ ಆಡಿದ್ದರು. ಅತೀ ಕಡಿಮೆ ಇನ್ನಿಂಗ್ಸ್ನಿಂದ 4000 ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ಇದುವರೆಗೂ ತವರಿನಲ್ಲಿ ಕೊಹ್ಲಿ 13 ಟೆಸ್ಟ್ ಶತಕ ಗಳಿಸಿದ್ದಾರೆ.
ತವರಿನಲ್ಲಿ ಎರಡನೇ ಅತ್ಯುತ್ತಮ ಟೆಸ್ಟ್ ಸರಾಸರಿ:ತವರಿನ ಟೆಸ್ಟ್‌ನಲ್ಲಿ ಕೊಹ್ಲಿ 59 ಸರಾಸರಿ ಹೊಂದಿದ್ದಾರೆ. ಇದು ತವರಿನಲ್ಲಿ ಭಾರತೀಯ ಕ್ರಿಕೆಟಿಗನೊಬ್ಬನ ಎರಡನೇ ಅತ್ಯುತ್ತಮ ಟೆಸ್ಟ್ ಸರಾಸರಿಯಾಗಿದೆ. ನಾಯಕ ರೋಹಿತ್ ಶರ್ಮಾ 66.73 ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿದ್ದು, 59ರ ಸರಾಸರಿಯ ವಿರಾಟ್ ದ್ವಿತೀಯ ಸ್ಥಾನದಲ್ಲಿದ್ದಾರೆ.