ದುಬೈ:122 ರನ್, 61 ಬಾಲ್, 12 ಬೌಂಡರಿ, 6 ಸಿಕ್ಸರ್.. ಇದು ವಿರಾಟ್ ರೂಪದ ಕೊಹ್ಲಿಯ ಬಿಗ್ ಕಮ್ಬ್ಯಾಕ್ ಇನಿಂಗ್ಸ್. ಏಷ್ಯಾ ಕಪ್ ಟೂರ್ನಿಯ ಅಫ್ಘಾನಿಸ್ಥಾನ ವಿರುದ್ಧ ಕೊಹ್ಲಿ ವೀರಾವೇಶದ ಶತಕ ಸಾಧನೆ ಮಾಡಿದ್ದಾರೆ. ಅದೂ 3 ವರ್ಷಗಳ ಬಳಿಕ ಎಂಬುದು ವಿಶೇಷ. ಇಷ್ಟಲ್ಲದೇ, 71 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಇದೇ ಚೊಚ್ಚಲ ಶತಕವಾಗಿದೆ.
ಒಂದು ಶತಕ ಹಲವು ದಾಖಲೆ: ವಿರಾಟ್ ಕೊಹ್ಲಿ ಸಿಡಿಸಿದ ಒಂದು ಶತಕ ಹಲವು ದಾಖಲೆಗಳನ್ನು ಬರೆದಿದೆ. ಭಾರತದ ಪರವಾಗಿ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಬಾರಿಸಿದ (122) ಬಾರಿಸಿದ ಮೊದಲ ಭಾರತೀಯ ಆಟಗಾರ. ಕಡಿಮೆ ಇನಿಂಗ್ಸ್ನಲ್ಲಿ ಅಧಿಕ ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಸಾಧನೆ ಮಾಡಿದರು.
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೂ 71 ಶತಕ ಸಿಡಿಸಿದ್ದು, ಇದಕ್ಕಾಗಿ ಅವರು 522 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 782 ಇನಿಂಗ್ಸ್ಗಳಲ್ಲಿ 100 ಶತಕಗಳನ್ನು ಸಿಡಿಸಿದ್ದಾರೆ.
ರಿಕ್ಕಿ ಪಾಂಟಿಂಗ್ ದಾಖಲೆ ಉಡೀಸ್:ಭರ್ಜರಿ ಕಮ್ಬ್ಯಾಕ್ ಮಾಡಿದ ವಿರಾಟ್ ಸಿಡಿಸಿದ ಮೊದಲ ಶತಕದಲ್ಲೇ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ರಿಕಿ ಪಾಂಟಿಂಗ್ ಅವರ ದಾಖಲೆಯ 71 ಶತಕಗಳ ಸಾಧನೆಯನ್ನು ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ರಿಕಿ ಪಾಂಟಿಂಗ್ ಜೊತೆಗೆ ಜಂಟಿಯಾಗಿ ಎರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
1024 ದಿನಗಳ ಬಳಿಕ ಶತಕ: ವಿರಾಟ್ ಕೊಹ್ಲಿಯ ಶತಕದ ಬರ ಕೊನೆಗೂ ನೀಗಿದೆ. 33 ವರ್ಷದ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 1024 ದಿನಗಳ ಬಳಿಕ ಶತಕ ಸಿಡಿಸಿದ್ದಾರೆ. ಇದು ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಶತಕವಾದರೆ, ಒಟ್ಟಾರೆ 71 ನೇ ಶತಕವಾಗಿದೆ.
ವಿರಾಟ್ ಕೊಹ್ಲಿ 3 ವರ್ಷಗಳ ನಂತರ, ನಿಖರವಾಗಿ 1020 ದಿನಗಳ ನಂತರ ಅಫ್ಘಾನಿಸ್ತಾನದ ವಿರುದ್ಧ ಡೆಡ್ ರಬ್ಬರ್‌ನಲ್ಲಿ ಭಾರತಕ್ಕಾಗಿ ಹೆಜ್ಜೆ ಹಾಕಿದಾಗ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿದರು. ಮೊಹಮ್ಮದ್ ನಬಿ ಟಾಸ್ ಗೆದ್ದು ಅಫ್ಘಾನಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಭಾರತ 20 ಓವರ್‌ಗಳಿಗೆ 212 ರನ್ ಬಾರಿಸಿತು. ಮಾಜಿ ನಾಯಕ ಕೇವಲ 61 ಎಸೆತಗಳಲ್ಲಿ ಔಟಾಗದೇ 122 ರನ್ ಗಳಿಸಿ ಪರಾಕ್ರಮ ಮೆರೆದರು.
2019 ರ ನವೆಂಬರ್‌ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಹಗಲು - ರಾತ್ರಿ ಟೆಸ್ಟ್‌ನಲ್ಲಿ ಕೊಹ್ಲಿ ಕೊನೆಯ ಬಾರಿಗೆ ಶತಕ ಗಳಿಸಿದ್ದರು. ಅದಾದ ಬಳಿಕ ಮೂರು ವರ್ಷಗಳ ನಂತರ 2022ರ ಸೆಪ್ಟೆಂಬರ್ 8 ರಂದು ಶತಕ ಬಾರಿಸುವ ಮೂಲಕ ಶತಕದ ಕಳಂಕ ಕಳೆದುಕೊಂಡರು.