ಹೈದರಾಬಾದ್: ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್ ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವಿಶ್ವಕಪ್ ಫೈನಲ್ ನಂತರ ಮತ್ತೆ ಮೈದಾನಕ್ಕೆ ಮರಳಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ 30ರವರೆಗೆ ಸೆಂಚೂರಿಯನ್, ಎರಡನೇ ಪಂದ್ಯ ಜನವರಿ 3ರಿಂದ 7 ರವರೆಗೆ ಕೇಪ್ ಟೌನ್‌ನಲ್ಲಿ ನಡೆಯಲಿದೆ.
ಸಂಗಕ್ಕಾರ vs ಕೊಹ್ಲಿ:ಈ ಪಂದ್ಯಗಳಲ್ಲಿ ವಿರಾಟ್ 66 ರನ್ ಗಳಿಸಿದ ತಕ್ಷಣವೇ ಹೊಸದೊಂದು ದಾಖಲೆ ನಿರ್ಮಿಸುವರು. ತಮ್ಮ ವೃತ್ತಿಜೀವನದಲ್ಲಿ ಈವರೆಗೆ ವಿರಾಟ್ ವರ್ಷವೊಂದರಲ್ಲಿ 2,000 ಅಂತರರಾಷ್ಟ್ರೀಯ ರನ್ ಗಳಿಸಿದ ಸಾಧನೆಯಲ್ಲಿ ಒಟ್ಟು 6 ಬಾರಿ ಮಾಡಿದ್ದಾರೆ. 2023ರಲ್ಲಿ 2 ಸಾವಿರ ರನ್ ಪೂರೈಸಲು ಅವರಿಗೆ ಕೇವಲ 66 ರನ್ಗಳ ಅವಶ್ಯಕತೆ ಇದೆ. ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಈ ರನ್ ಗಳಿಸುತ್ತಿದ್ದಂತೆ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕಾರ ದಾಖಲೆ ಮುರಿಯುವರು.
ಸದ್ಯ ಲಂಕಾ ಬ್ಯಾಟರ್ ಸಂಗಕ್ಕಾರ ಮತ್ತು ವಿರಾಟ್ ಕೊಹ್ಲಿ ವರ್ಷದಲ್ಲಿ 2,000 ರನ್ ಪೂರೈಸಿದ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದಾರೆ. 2023ರ ಕೊನೆಯ ಪಂದ್ಯವಾದ ಸೆಂಚೂರಿಯನ್ ಟೆಸ್ಟ್‌ನಲ್ಲಿ ವಿರಾಟ್ 66 ರನ್ ಗಳಿಸಿದರೆ 7ನೇ ಬಾರಿಗೆ 2,000 ಗಡಿ ದಾಟಿದಂತಾಗುತ್ತದೆ. ಇದರಿಂದ ವಿರಾಟ್ 7ನೇ ಬಾರಿಗೆ ಈ ಸಾಧನೆ ಮಾಡಲಿದ್ದು ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದ್ದಾರೆ.