ಮುಂಬೈ:ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಟೂರ್ನಿ ಆರಂಭಗೊಳ್ಳಲು ಕೇವಲ ಎರಡು ದಿನ ಮಾತ್ರ ಬಾಕಿ. ಈಗಾಗಲೇ ಎಲ್ಲ ತಂಡಗಳು ಭರ್ಜರಿಯಾಗಿ ತಯಾರಿ ನಡೆಸುತ್ತಿವೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಕೂಡ ಸನ್ನದ್ಧಗೊಳ್ತಿದ್ದು, ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕ್ಗೆ ಸೋಲಿನ ರುಚಿ ತೋರಿಸಲು ತಯಾರಾಗ್ತಿದೆ. ಇದರ ಮಧ್ಯೆ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಇದೇ ಮೊದಲ ಸಲ ಮಾತನಾಡಿದರು.
"ನನ್ನ ಆಟ ಎಲ್ಲಿದೆ, ಅದರಲ್ಲಿನ ಏರಿಳಿತಗಳೇನು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಕೆಟ್ಟ ದಿನಗಳ ಬಗ್ಗೆ ಯೋಚನೆ ಮಾಡಲ್ಲ. ಓರ್ವ ಕ್ರೀಡಾಪಟುವಾಗಿ ತಪ್ಪುಗಳಿಂದ ಸಾಕಷ್ಟು ಕಲಿತಿದ್ದೇನೆ" ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, "2014ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲೂ ಇಂತಹ ಸಮಸ್ಯೆ ಎದುರಿಸಿರುವುದು ಇಡೀ ಜಗತ್ತಿಗೆ ಗೊತ್ತಿದೆ. ತದನಂತರ ಕಮ್ಬ್ಯಾಕ್ ಮಾಡಿದ್ದೇನೆ. ತಪ್ಪುಗಳಾಗುವುದು ಸಾಮಾನ್ಯ. ಅದಕ್ಕೆ ಪರಿಹಾರದ ಹಾದಿ ಕಂಡುಕೊಳ್ಳಬೇಕು. ನನ್ನ ಆಟ ಇದೀಗ ಅರ್ಥವಾಗಿದೆ. ನನ್ನಲ್ಲಾಗಿರುವ ಬ್ಯಾಟಿಂಗ್ ಏರಿಳಿತದ ಬಗ್ಗೆ ಚೆನ್ನಾಗಿ ಗೊತ್ತಿದೆ" ಎಂದರು.
ಇದನ್ನೂ ಓದಿ:ಏಷ್ಯಾಕಪ್ಗೋಸ್ಕರ ಅಭ್ಯಾಸ ಆರಂಭಿಸಿದ ಕೊಹ್ಲಿ: 100ನೇ ಟಿ20 ಪಂದ್ಯಕ್ಕೆ ತಯಾರಿ
ವಿರಾಟ್ ಕೊಹ್ಲಿ ಕಳೆದ ಮೂರು ವರ್ಷದಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ, ವೆಸ್ಟ್ ಇಂಡೀಸ್, ಜಿಂಬಾಬ್ವೆ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡು ಇದೀಗ ಏಷ್ಯಾಕಪ್ನಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಕಳೆದ ಕೆಲ ವಾರಗಳಿಂದ ಬೆವರು ಹರಿಸುತ್ತಿರುವ ರನ್ ಮಷಿನ್ ಖ್ಯಾತಿಯ ವಿರಾಟ್, ಮಾನಸಿಕವಾಗಿ ಸದೃಢಗೊಂಡಿದ್ದಾರೆ.
100ನೇ ಟಿ20 ಆಡಲು ವಿರಾಟ್ ಸಜ್ಜು:ಏಷ್ಯಾಕಪ್ನಲ್ಲಿ ಪಾಕಿಸ್ತಾನದೆದುರು ವಿರಾಟ್ ಕಣಕ್ಕಿಳಿಯುವ ಮೂಲಕ ಟಿ20ಯಲ್ಲಿ 100ನೇ ಪಂದ್ಯ ಆಡಲಿದ್ದಾರೆ. ಈ ಪಂದ್ಯದ ಮೂಲಕ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಇಷ್ಟು ದಿನ ಕೆಂಪು ಬಣ್ಣದ ಸ್ಟಿಕರ್ನಿಂದ ಕೂಡಿದ MRF ಬ್ಯಾಟ್ ಬಳಸುತ್ತಿದ್ದ ಅವರೀಗ ಗೋಲ್ಡ್ ಎಡಿಷನ್ ಬ್ಯಾಟ್ ಬಳಸಲು ನಿರ್ಧರಿಸಿದ್ದಾರೆ ಎಂದೂ ವರದಿಯಾಗಿದೆ. ಇದರ ಬೆಲೆ 22 ಸಾವಿರ ರೂ. ಇದೆ.
ಆಗಸ್ಟ್ 27ರಿಂದ ಏಷ್ಯಾಕಪ್ ಆರಂಭಗೊಳ್ಳಲಿದೆ. ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪಾಕ್ ವಿರುದ್ಧ ವಿರಾಟ್ ಸಾಧನೆ ಏನು?: ಪಾಕಿಸ್ತಾನ ವಿರುದ್ಧ ನಡೆಯಲಿರುವ ಟಿ20 ಪಂದ್ಯದಲ್ಲಿ ವಿರಾಟ್ ಹೊಸ ದಾಖಲೆ ಬರೆಯುವರು. ಈ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಇವರು 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿರುವ ಸಾಧನೆ ಮಾಡಲಿದ್ದಾರೆ. ಅಷ್ಟೇ ಅಲ್ಲ, ಈ ದಾಖಲೆ ನಿರ್ಮಿಸುವ ಎರಡನೇ ಭಾರತೀಯ ಆಟಗಾರನಾಗಲಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 132 ಟಿ20 ಪಂದ್ಯಗಳನ್ನಾಡಿದ್ದಾರೆ.
33 ವರ್ಷದ ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 91 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 50ರ ಸರಾಸರಿಯಲ್ಲಿ 3,308 ರನ್ ಗಳಿಸಿದ್ದಾರೆ. ಇದರಲ್ಲಿ 50 ಅರ್ಧಶತಕಗಳು ಸೇರಿವೆ.
ಏಷ್ಯಾ ಕಪ್‌ಗೆ ಟೀಂ ಇಂಡಿಯಾ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್ ಹಾಗು ಅವೇಶ್ ಖಾನ್