ಆಗಸ್ಟ್ 27ರಿಂದ ಆರಂಭಗೊಳ್ಳಲಿರುವ ಏಷ್ಯಾ ರಾಷ್ಟ್ರಗಳ ಟಿ20 ಕ್ರಿಕೆಟ್ ಕದನ ಏಷ್ಯಾಕಪ್ಗೆ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ. ವೆಸ್ಟ್ ಇಂಡೀಸ್ ಸರಣಿಯಿಂದ ಹೊರಗುಳಿದಿದ್ದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಸರಣಿ ಆರಂಭಗೊಳ್ಳಲು 15 ದಿನಗಳು ಬಾಕಿ ಇದ್ದು, ಈಗಾಗಲೇ ರನ್ ಮಷಿನ್ ಖ್ಯಾತಿಯ ವಿರಾಟ್ ಅಭ್ಯಾಸ ಆರಂಭಿಸಿದ್ದಾರೆ.
ಏಷ್ಯಾಕಪ್ನಲ್ಲಿ ಟೀಂ ಇಂಡಿಯಾ ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಯುಎಇನಲ್ಲಿ ಸೆಣಸಲಿದೆ. ಇದು ಕೊಹ್ಲಿಗೆ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವೂ ಹೌದು. ಹೀಗಾಗಿ, ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಇಟ್ಟುಕೊಂಡಿದ್ದಾರೆ. ಒಳಾಂಗಣ ಮೈದಾನದಲ್ಲಿ ವಿರಾಟ್ ಅಭ್ಯಾಸ ನಡೆಸುತ್ತಿದ್ದು, ಚಿಕ್ಕ ವಿಡಿಯೋ ತುಣುಕನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಏಷ್ಯಾ ಕಪ್ಗೆ 15 ಸದಸ್ಯರ ಟೀಂ ಇಂಡಿಯಾ: ಕೆ.ಎಲ್.ರಾಹುಲ್ ಉಪನಾಯಕ, ಜಸ್ಪ್ರೀತ್, ಹರ್ಷಲ್ ಔಟ್
ಜುಲೈ-ಆಗಸ್ಟ್ ತಿಂಗಳಲ್ಲಿ ವಿಂಡೀಸ್ ವಿರುದ್ಧದ ಮೂರು ಏಕದಿನ ಹಾಗೂ 5 ಟಿ20 ಪಂದ್ಯಗಳಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು. ಇದೀಗ ಬಿಸಿಸಿಐ ಆಯ್ಕೆ ಸಮಿತಿ ಏಷ್ಯಾಕಪ್ಗೆ ಪ್ರಕಟಿಸಿರುವ 15 ಸದಸ್ಯರ ತಂಡದ ಬಳಗದಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ಕಳೆದ ಎರಡೂವರೆ ವರ್ಷಗಳಿಂದ ರನ್ ಬರ ಎದುರಿಸುತ್ತಿರುವ ಕೊಹ್ಲಿ ಏಷ್ಯಾಕಪ್ನಲ್ಲಿ ಅಬ್ಬರಿಸುವ ಸಾಮರ್ಥ್ಯ ಹೊಂದಿದ್ದು, ಅವರ ಬ್ಯಾಟ್ನಿಂದ ರನ್ ಹರಿದು ಬರುವ ಸಾಧ್ಯತೆ ಇದೆ.