ಅಹಮದಾಬಾದ್ (ಗುಜರಾತ್): ರನ್ ಮಷಿನ್ ವಿರಾಟ್ ಕೊಹ್ಲಿ ನಡೆಯುತ್ತಿರುವ ವಿಶ್ವಕಪ್ನಲ್ಲಿ ಭರ್ಜರಿ ರನ್ ಗಳಿಸಿ ದಾಖಲೆ ಮಾಡಿದ್ದಾರೆ. 4ನೇ ವಿಶ್ವಕಪ್ ಟೂರ್ನಿ ಆಡಿದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ರಿಕಿ ಪಾಂಟಿಂಗ್ ಅವರ ಸ್ಕೋರ್ ಹಿಂದಿಕ್ಕೆ ಎರಡನೇ ಸ್ಥಾನವನ್ನು ತಲುಪಿದ್ದಾರೆ. 4 ವಿಶ್ವಕಪ್ನಲ್ಲಿ 37 ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ 1,795 ರನ್ ಕಲೆ ಹಾಕಿದ್ದಾರೆ.
2023ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ 765 ರನ್ ಕಲೆಹಾಕಿದ್ದಾರೆ. ಇದು ಒಂದು ವಿಶ್ವಕಪ್ನಲ್ಲಿ ಒಬ್ಬ ಆಟಗಾರ ಗಳಿಸಿದ ಅತಿ ಹೆಚ್ಚಿನ ರನ್ ಆಗಿದೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್ 2003ರ ವಿಶ್ವಕಪ್ನಲ್ಲಿ 673 ರನ್ ಗಳಿಸಿದ್ದು, ದಾಖಲೆ ಆಗಿತ್ತು. ವಿರಾಟ್ ಸೆಮೀಸ್ನಲ್ಲಿ ಶತಕ ಗಳಿಸಿದಾಗಲೇ ಸಚಿನ್ ದಾಖಲೆ ಮುರಿದಿದ್ದರು. ಆದರೆ 6 ವಿಶ್ವಕಪ್ಗಳನ್ನು ಆಡಿದ ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ.
2023ರ ವಿಶ್ವಕಪ್ ಫೈನಲ್ನಲ್ಲಿ 54 ರನ್ ಗಳಿಸಿದ ವಿರಾಟ್ ಕೊಹ್ಲಿ 4 ವಿಶ್ವಕಪ್ನ 37 ಪಂದ್ಯಗಳಿಂದ 59.83ರ ಸರಾಸರಿಯಲ್ಲಿ 1,795 ರನ್ ಗಳಿಸಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿಯ 5 ಶತಕ ಮತ್ತು 12 ಅರ್ಧಶತಕಗಳಿವೆ. 117 ಅವರ ವಿಶ್ವಕಪ್ನ ಅತ್ಯತ್ತಮ ಸ್ಕೋರ್ ಆಗಿದೆ. ರಿಕಿ ಪಾಂಟಿಂಗ್ 1,743 ರನ್ ಕಲೆಹಾಕಿದ್ದರು. ವಿರಾಟ್ ಕೊಹ್ಲಿ ಪಾಂಟಿಂಗ್ ಅವರಿಗಿಂತ 52 ರನ್ ಹೆಚ್ಚು ಗಳಿಸಿದ್ದಾರೆ. ವಿರಾಟ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಮೊದಲ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ ಇದ್ದಾರೆ. 6 ವಿಶ್ವಕಪ್ ಟೂರ್ನಿಯನ್ನು ಆಡಿದ 'ಮಾಸ್ಟರ್ ಬ್ಲಾಸ್ಟರ್' ಸಚಿನ್ ತೆಂಡೂಲ್ಕರ್ 44 ಇನ್ನಿಂಗ್ಸ್‌ಗಳಲ್ಲಿ 6 ಶತಕ ಮತ್ತು 15 ಅರ್ಧಶತಕದಿಂದ 2,278 ರನ್ ಗಳಿಸಿದ್ದಾರೆ.
ಅತಿ ಹೆಚ್ಚು ಅರ್ಧಶತಕ:ವಿರಾಟ್ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಒಂಬತ್ತು ಅರ್ಧಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ವಿರಾಟ್ ಈ ವಿಶ್ವಕಪ್ನಲ್ಲಿ 3 ಶತಕ ಮತ್ತು 6 ಅರ್ಧಶತಕ ಗಳಿಸಿದ್ದಾರೆ. ಹೀಗಾಗಿ 50+ ರನ್ ಗಳಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 2003 ರಲ್ಲಿ ತೆಂಡೂಲ್ಕರ್ ಮತ್ತು 2019ರಲ್ಲಿ ಶಕೀಬ್ ಅಲ್ ಹಸನ್ ಏಳು ಅರ್ಧಶತಕಗಳಿಸಿದ್ದು ದಾಖಲೆ ಆಗಿತ್ತು. ವಿರಾಟ್ ಇದನ್ನು ಮೀರಿದ್ದಾರೆ.
ಇದನ್ನೂ ಓದಿ:ಆಸೀಸ್ಗೆ ಆಸರೆ ಆದ ಹೆಡ್, ಲಬುಶೇನ್ ಜೊತೆಯಾಟ : ದುಬಾರಿ ಆದ ಭಾರತದ ಬೌಲರ್ಸ್