ಸೆಂಚುರಿಯನ್:ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ಸೋಲಿನ ನಡುವೆಯೂ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೆಲವು ಅದ್ಭುತ ಹೊಡೆತಗಳೊಂದಿಗೆ ಆಕರ್ಷಕ ಅರ್ಧಶತಕ ಬಾರಿಸಿದ್ದು, ಶ್ರೀಲಂಕಾದ ದಿಗ್ಗಜ ಆಟಗಾರ ಕುಮಾರ ಸಂಗಕ್ಕಾರ ಅವರ ಹೆಸರಲ್ಲಿದ್ದ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಕೊಹ್ಲಿ ಗುರುವಾರ ಏಳನೇ ಬಾರಿಗೆ ಕ್ಯಾಲೆಂಡರ್ ವರ್ಷವೊಂದರಲ್ಲಿ 2000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಅಪರೂಪದ ಸಾಧನೆ ಮಾಡಿದರು. ಇದಕ್ಕೂ ಮುನ್ನ ಆರು ಬಾರಿ 2000+ ರನ್ ಗಳಿಸಿದ್ದ ಸಂಗಕ್ಕಾರ ಅವರನ್ನು ವಿರಾಟ್ ಹಿಂದಿಕ್ಕಿದರು.
ಮೊದಲ ಬಾರಿಗೆ 2012 ರಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ವಿರಾಟ್, 53.31 ಸರಾಸರಿಯೊಂದಿಗೆ 2186 ರನ್ ಗಳಿಸಿದ್ದರು. 2014 ರಲ್ಲಿಯೂ ಸ್ಟಾರ್ ಬ್ಯಾಟರ್ 55.75 ಸರಾಸರಿಯೊಂದಿಗೆ 2286 ರನ್ ಬಾರಿಸಿದ್ದರು. ಒಂದೆರಡು ವರ್ಷಗಳ ನಂತರ 2016ರಿಂದ 2019ರ ತನಕ ಸತತ ನಾಲ್ಕು ವರ್ಷಗಳ ಕಾಲ 2000 ಕ್ಕೂ ಹೆಚ್ಚು ರನ್ ಗಳಿಸಿದ ಕೊಹ್ಲಿ ಸ್ಥಿರ ಪ್ರದರ್ಶನ ತೋರಿದ್ದರು. ಬಳಿಕ ಫಾರ್ಮ್‌ನಲ್ಲಿ ಸ್ವಲ್ಪ ಕುಸಿತ ಕಂಡು ಬಂದಿತ್ತು. ಆ ಬಳಿಕ 2023ರಲ್ಲಿ ಪುನಃ ಬ್ಯಾಟಿಂಗ್ ವೈಭವ ತೋರಿದ ವಿರಾಟ್ ಮತ್ತೊಮ್ಮೆ ತಮ್ಮ ಕ್ಲಾಸ್ ಸಾಬೀತು ಮಾಡಿದ್ದಾರೆ.