ಲಂಡನ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸುವ ಮುನ್ನ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಹುರುಪಿನಿಂದ ತಯಾರಿ ನಡೆಸುತ್ತಿದ್ದು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ, ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರರಿಗೆ ಸಾಕಷ್ಟು ಪ್ರೋತ್ಸಾಹಿಸುತ್ತಿದ್ದಾರೆ ಮತ್ತು ಕಾಲಕಾಲಕ್ಕೆ ಬ್ಯಾಟಿಂಗ್‌ಗೆ ಅಗತ್ಯವಾದ ಸಲಹೆಗಳನ್ನು ಸಹ ನೀಡುತ್ತಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಪೂಜಾರ ಭಾರತ ತಂಡದಲ್ಲಿ ಅನುಭವಿ ಬ್ಯಾಟರ್ಗಳಾಗಿದ್ದಾರೆ. ಇವರ ಜೊತೆ ಈಗ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಕೆಲ ಯುವಕರು ಸೇರಿದ್ದು, ಯುವಕರು ಅನುಭವಿಗಳ ಅಡಿ ಅಭ್ಯಾಸದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಶುಭಮನ್ ಗಿಲ್ ಮತ್ತು ಕೆ.ಎಸ್.ಭರತ್ಗೆ ವಿದೇಶಿ ಪಿಚ್ಗಳಲ್ಲಿನ ಬ್ಯಾಟಿಂಗ್ ಅನುಭವ ಕಲಿಯಲು ಸಹಕಾರಿಯಾಗಲಿದೆ.
ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರು ತಮ್ಮ ಅನುಭವದ ಲಾಭವನ್ನು ತಂಡದ ಯುವ ಆಟಗಾರರಿಗೆ ನೀಡಲು ಪ್ರಯತ್ನಿಸುತ್ತಾರೆ ಮತ್ತು ಅವರಿಗೆ ಬ್ಯಾಟಿಂಗ್ ಸಲಹೆಗಳನ್ನು ನೀಡುವ ಮೂಲಕ ಅವರ ಆಟವನ್ನು ಇನ್ನಷ್ಟು ಉತ್ತಮ ಮಾಡಲು ಸಲಹೆ ನೀಡುತ್ತಾರೆ. ಐಪಿಎಲ್ನಲ್ಲಿ ಪಂದ್ಯ ಮುಗಿದ ನಂತರ ಯುವ ಆಟಗಾರರ ಜೊತೆ ವಿರಾಟ್ ಕೊಹ್ಲಿ ಸಂಭಾಷಣೆ ನಡೆಸುತ್ತಿದ್ದರು. ಬ್ಯಾಟಿಂಗ್ ಸಲಹೆಗಳನ್ನು ಕೊಡುತ್ತಿದ್ದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಮೊದಲ ಮತ್ತು ಎರಡನೇ ಬ್ಯಾಚ್ನಲ್ಲಿ ಲಂಡನ್ ತೆರಳಿದ ಆಟಗಾರರು ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ವಿರಾಟ್, ಅಶ್ವಿನ್, ಸಿರಾಜ್, ಉಮೇಶ್ ಯಾದವ್ ಮತ್ತು ತಂಡದ ಕೊಚ್ ಹಾಗೂ ಸಹಾಯಕ ಸಿಬ್ಬಂದಿ ಮೊದಲ ಯುಕೆಗೆ ಹಾರಿದ್ದರು. ಪ್ಲೇ ಆಫ್ನಲ್ಲಿ ಮುಂಬೈ ಸೋತ ನಂತರ ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಜೈಸ್ವಾಲ್ ಒಟ್ಟಿಗೆ ಲಂಡನ್ಗೆ ತೆರಳಿದ್ದರು. ಸದ್ಯ ಆಟಗಾರರು ಇಲ್ಲಿನ ಅರುಂಡೆಲ್ ಕ್ಯಾಸಲ್ ಕ್ರಿಕೆಟ್ ಕ್ಲಬ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಹೊಸ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಾರೆ.