ದುಬೈ(ಯುಎಇ): ಭಾರತ-ಪಾಕಿಸ್ತಾನ ನಡುವಿನ ನಿನ್ನೆ ನಡೆದ ಸೂಪರ್ 4 ಏಷ್ಯಾ ಕಪ್ ಪಂದ್ಯ ಸಿಕ್ಕಾಪಟ್ಟೆ ರೋಚಕತೆಯಿಂದ ಕೂಡಿತ್ತು. ಕೊನೆಯ ಕ್ಷಣದಲ್ಲಿ ಟೀಂ ಇಂಡಿಯಾ ಆಟಗಾರನೋರ್ವ ಮಾಡಿರುವ ಸಣ್ಣ ತಪ್ಪಿನಿಂದಾಗಿ ಈ ಪಂದ್ಯವನ್ನು ರೋಹಿತ್ ಶರ್ಮಾ ಬಳಗ ಕೈಚೆಲ್ಲಿದೆ ಎಂಬ ಮಾತು ಕೇಳಿ ಬರಲು ಶುರುವಾಗಿವೆ. ಜೊತೆಗೆ ಯುವ ಆಟಗಾರ ಅರ್ಷ್‌ದೀಪ್ ವಿರುದ್ಧ ಆಕ್ರೋಶ ವ್ಯಕ್ತವಾಗಲು ಶುರುವಾಗಿದೆ.
ಆಗಿದ್ದೇನು?:ಟೀಂ ಇಂಡಿಯಾ ನೀಡಿದ್ದ 182 ರನ್ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಕೊನೆಯ ಮೂರು ಓವರ್ಗಳಲ್ಲಿ ಒತ್ತಡಕ್ಕೊಳಗಾಗಿತ್ತು. ರವಿ ಬಿಷ್ಣೋಯ್ ಎಸೆದ 18ನೇ ಓವರ್ನಲ್ಲಿ ಆಸೀಫ್ ಅಲಿ ಸುಲಭ ಕ್ಯಾಚ್ ನೀಡಿದ್ದರು. ಆದರೆ, ಅರ್ಷದೀಪ್ ಸಿಂಗ್ ಕ್ಯಾಚ್ ಕೈಚೆಲ್ಲಿದ್ದರು. ಈ ವಿಚಾರವಾಗಿ ಮೈದಾನದಲ್ಲೇ ರೋಹಿತ್ ಶರ್ಮಾ ಬೌಲರ್ ಅರ್ಷ್‌ದೀಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅದು ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಅತ್ಯಂತ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್ ಅನ್ನು ಅರ್ಷ್‌ದೀಪ್ ಡ್ರಾಪ್ ಮಾಡಿದ್ದರಿಂದ ಅದರ ಸದುಪಯೋಗ ಪಡೆದುಕೊಂಡ ಆಸೀಫ್ 19ನೇ ಓವರ್ನಲ್ಲಿ ಮಿಂಚು ಹರಿಸಿದರು. 1 ಸಿಕ್ಸರ್, 2 ಬೌಂಡರಿ ಸಿಡಿಸಿ, 16ರನ್ಗಳಿಸಿ, ಪಂದ್ಯದ ಚಿತ್ರಣ ಬದಲಿಸಿದ್ದರು.