ದುಬೈ:ಭಾನುವಾರ ನಡೆದ ಚುಟುಕು ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದೆ.
ಈ ಹೈವೋಲ್ಟೇಜ್ ಪಂದ್ಯದ ಬಳಿಕ ಮೈದಾನದಲ್ಲಿ ಪಾಕ್ ಮತ್ತು ಭಾರತದ ಆಟಗಾರರು ನಡೆದುಕೊಂಡ ಆಪ್ತತೆ ದೃಶ್ಯಗಳು ಈಗ ವೈರಲ್ ಆಗುತ್ತಿವೆ. ಸಾಂಪ್ರದಾಯಿಕ ವೈರಿ ಪಾಕ್ ಗೆಲುವು ಸಾಧಿಸುತ್ತಿದ್ದಂತೆ ಟೀ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
ಪಾಕ್ ಗೆಲುವಿಗೆ ಕಾರಣರಾದ ಬಾಬರ್ ಹಾಗೂ ರಿಜ್ವಾನ್ ಅವರ ಬುಜ ತಟ್ಟಿ ಅವರ ಅದ್ಭುತ ಆಟವನ್ನು ಶ್ಲಾಘಿಸುತ್ತಿರುವ ವಿಡಿಯೋ ಮತ್ತು ಫೋಟೋಗಳನ್ನು ಐಸಿಸಿ ಸಹ ಶ್ಲಾಘನೆ ಮಾಡಿದೆ. ಅಲ್ಲದೇ ನೆಟಿಜನ್ಗಳು ಕೂಡ ಇದು ನಿಜವಾದ ಕ್ರೀಡಾಸ್ಫೂರ್ತಿ ಎಂದು ಕಮೆಂಟ್ ಮಾಡಿದ್ದಾರೆ.
ವಿಶ್ವಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ವಿರಾಟ್ ಕೊಹ್ಲಿ ಕ್ರೀಡಾಸ್ಫೂರ್ತಿ ಮೆರೆದಿದ್ದು, ಇದೇ ಮೊದಲೇನು ಅಲ್ಲ. ತಂಡ ಗೆಲುವು ಸಾಧಿಸಿದರೆ ಸಾಲದು ಆಟಗಾರರ ಮನಸ್ಸನ್ನು ಗೆಲ್ಲುವುದು ಅವರ ಸ್ವಭಾವ. ನಿನ್ನೆ (ಭಾನುವಾರ) ನಡೆದ ಪಂದ್ಯ ಮಗದೊಂದು ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾಗಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ತಂಡ ನಿರ್ಣಾಯಕ 20 ಓವರ್ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 151 ರನ್ ಕಲೆ ಹಾಕಿತ್ತು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೇ 152ರನ್ಗಳ ಗುರಿ ತಲುಪುವ ಮೂಲಕ ಗೆಲುವು ಸಾಧಿಸಿದೆ. ಬಾಬರ್ ಆಜಂ ಅಜೇಯ 68ರನ್ ಹಾಗೂ ರಿಜ್ವಾನ್ ಅಜೇಯ 79ರನ್ಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣರಾದರು.