ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶುಕ್ರವಾರ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ನಾಮನಿರ್ದೇಶಿತ ಆಟಗಾರ ಹೆಸರನ್ನು ಪ್ರಕಟಿಸಿದೆ. ವರ್ಷದ ಶ್ರೇಷ್ಠ ಪುರುಷ ಕ್ರಿಕೆಟಿಗ ಗೌರವ ಎಂದು ಕರೆಯಲ್ಪಡುವ ಈ ಪ್ರಶಸ್ತಿಯ ರೇಸ್ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಆಲ್‌ರೌಂಡರ್ ರವೀಂದ್ರ ಜಡೇಜಾ ಇದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್, ನಾಯಕ ಪ್ಯಾಟ್ ಕಮಿನ್ಸ್ ಹೆಸರು ಕೂಡ ಈ ಪಟ್ಟಿಯಲ್ಲಿದ್ದು, ತೀವ್ರ ಪೈಪೋಟಿ ಇದೆ.
2023ರಲ್ಲಿ ವಿರಾಟ್ ಪ್ರದರ್ಶನ:2023ರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಸೇರಿ ಒಟ್ಟು 35 ಪಂದ್ಯಗಳನ್ನು ಆಡಿ, 2048 ರನ್ ಕಲೆಹಾಕಿದ್ದಾರೆ. ಇದೇ ವೇಳೆ ವಿಶ್ವಕಪ್‌ನಲ್ಲಿ ತಮ್ಮ 50ನೇ ODI ಶತಕ ಸಿಡಿಸಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ವಿಶ್ವ ದಾಖಲೆ ಮುರಿದಿದ್ದರು.
ಟ್ರಾವಿಸ್ ಹೆಡ್:ಆಸ್ಟ್ರೇಲಿಯದ ಬ್ಯಾಟರ್ ಟ್ರಾವಿಸ್ ಹೆಡ್ 2023ರಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಒಟ್ಟು 31 ಪಂದ್ಯಗಳನ್ನು ಆಡಿ, 1698 ರನ್ ಬಾರಿಸಿದ್ದಾರೆ. ಭಾರತದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಶತಕ ದಾಖಲಿಸಿ ಮಿಂಚಿದ್ದರು.
ರವೀಂದ್ರ ಜಡೇಜಾ:ಆಲ್‌ರೌಂಡರ್ ಜಡೇಜಾ ಕಳೆದ ವರ್ಷ ಒಟ್ಟು 35 ಪಂದ್ಯಗಳಲ್ಲಿ 613 ರನ್ ಗಳಿಸಿದ್ದಾರೆ. ಇದಲ್ಲದೆ, 66 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2023ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಜಡೇಜಾ ಆಸ್ಟ್ರೇಲಿಯಾ ವಿರುದ್ಧ 22 ವಿಕೆಟ್ ಪಡೆದಿದ್ದರು.