2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಒಂದು ಶತಕ ಹಾಗೂ 3 ಅರ್ಧ ಶತಕಗಳ ನೆರವಿನಿಂದ 354 ರನ್ ಗಳಿಸಿ ಟಾಪ್ ಸ್ಕೋರರ್ ಆಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಕಿಂಗ್ ಕೊಹ್ಲಿ, 104 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸ್ ನೆರವಿನಿಂದ 95 ರನ್ ಗಳಿಸಿ ಮ್ಯಾಟ್ ಹೆನ್ರಿ ಬೌಲಿಂಗ್ನಲ್ಲಿ ಸಿಕ್ಸರ್ ಬಾರಿಸಿ ಶತಕ ಸಿಡಿಸುವ ರಭಸದಲ್ಲಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಈ ಮೂಲಕ 49ನೇ ಶತಕದೊಂದಿಗೆ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟುವ ಅವಕಾಶ ಕೈಚೆಲ್ಲಿಕೊಂಡರಾದರೂ ತಂಡವನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿದ್ದರು. ಹೀಗಾಗಿ, ಕೊಹ್ಲಿ ಅವರನ್ನು ಚೇಸ್ ಮಾಸ್ಟರ್ ಎಂದು ಕರೆಯಲಾಗುತ್ತದೆ.
2023ರ ವಿಶ್ವಕಪ್‌ನ 21ನೇ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಧರ್ಮಶಾಲಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೆಲುವಿನ ಹೀರೋ ಆಗಿ ಮಿಂಚಿದರು. ಕಷ್ಟದ ಪರಿಸ್ಥಿತಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಆದರೆ, ಶತಕ ಪೂರೈಸುವಲ್ಲಿ ವಿಫಲರಾದರು. ಇದಾದ ಬಳಿಕ ರವೀಂದ್ರ ಜಡೇಜಾ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಇನ್ನೂ ಎರಡು ಓವರ್ಗಳು ಬಾಕಿ ಇರುವಂತೆ ಗೆಲುವು ತಂದುಕೊಟ್ಟರು. ವಿರಾಟ್ ಅವರ ಅದ್ಭುತ ಪ್ರದರ್ಶನವನ್ನು ಭಾರತದ ಹಾಲಿ ಮತ್ತು ಮಾಜಿ ಆಟಗಾರರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ :ವಿಶ್ವಕಪ್ 2023: ಇಂದು ಪಾಕಿಸ್ತಾನ vs ಅಫ್ಘಾನಿಸ್ತಾನ ಫೈಟ್ : ಪಿಚ್ ಹೇಗಿದೆ ಗೊತ್ತಾ?