ಮುಂಬೈ: ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಫುಟ್ಬಾಲ್ ಸೂಪರ್ ಸ್ಟಾರ್ ಕ್ರಿಶ್ಚಿಯಾನೋ ರೊನಾಲ್ಡೊ ಅವರಂದಿಗೆ ಹೋಲಿಕೆ ಮಾಡಿದ್ದು, ಇವರಿಬ್ಬರೂ ತಮ್ಮ ಕ್ರೀಡೆಯಲ್ಲಿ ಬಹುದೊಡ್ಡ ಬ್ರ್ಯಾಂಡ್ ಎಂದು ಪ್ರಶಂಸಿಸಿದ್ದಾರೆ.
ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಲಯಕ್ಕೆ ಮರಳಿದ್ದಾರೆ. ಇದು 2022ರ ಆವೃತ್ತಿಯಲ್ಲಿ ಅವರ ಮೊದಲ ಅರ್ಧಶತಕವಾಗಿದೆ. ಆದರೆ, ಇದು ಅವರ ತಂಡ ಸೋತಾಗ ಬಂದಿದ್ದು ನಿಜಕ್ಕೂ ಬೇಸರದ ಸಂಗತಿ. ಸತತ 2 ಡಕ್ಔಟ್ಗಳ ನಂತರ ಅವರು 53 ಎಸೆತಗಳಲ್ಲಿ 58 ರನ್ಗಳಿಸಿದ್ದರು. ಇವರ ನೆರವಿನಿಂದ ಆರ್ಸಿಬಿ 170ರನ್ಗಳಿಸಿತ್ತು. ಆದರೆ, ಮಿಲ್ಲರ್(39) ಮತ್ತು ತೆವಾಟಿಯಾ(43) ಅಜೇಯ 79 ರನ್ಗಳ ಜೊತೆಯಾಟ ನಡೆಸಿ ಗುಜರಾತ್ ತಂಡಕ್ಕೆ ಜಯ ತಂದುಕೊಟ್ಟಿದ್ದರು.
ಕೊಹ್ಲಿ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ ಅವರ ಕಡೆ ಒಮ್ಮೆ ನೋಡಬೇಕು. ಅವರಿಬ್ಬರು ಅವರ ಕ್ರೀಡೆಗಳಲ್ಲಿ ವಿಭಿನ್ನ ತಂಡಗಳ ಪರ ಆಡುವ ಒಂದೇ ರೀತಿಯ ಬ್ರ್ಯಾಂಡ್ಗಳಾಗಿದ್ದಾರೆ. ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಉತ್ತುಂಗದಲ್ಲಿದ್ದಾರೆ ಮತ್ತು ಕ್ರಿಕೆಟ್ನಲ್ಲಿ ಅವರ ಬ್ರ್ಯಾಂಡ್ ಕೂಡ ಅತ್ಯುನ್ನತ ಸ್ಥಾನದಲ್ಲಿದೆ. ರೊನಾಲ್ಡೊ ಫುಟ್ಬಾಲ್ನ ಟಾಪ್ ಆಟಗಾರರಾಗಿದ್ದಾರೆ. ಒಬ್ಬರು ಮ್ಯಾಂಚೆಸ್ಟರ್ ಪರ ಆಡುತ್ತಾರೆ, ಮತ್ತೊಬ್ಬರು ಆರ್ಸಿಬಿ ಮತ್ತು ಭಾರತದ ಪರ ಆಡುತ್ತಾರೆ. ಅವರಿಬ್ಬರು ದೊಡ್ಡ ಬ್ರ್ಯಾಂಡ್ಗಳಾಗಿರುವುದರಿಂದ, ಅವರು ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಆದರೆ, ದೊಡ್ಡ ಬ್ರ್ಯಾಂಡ್ಗಳು ತಮ್ಮ ತಂಡವನ್ನು ಗೆಲ್ಲಿಸುವ ಮೂಲಕ ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಬಯಸುತ್ತಿರುತ್ತಾರೆ ಎಂದು ಪೀಟರ್ಸನ್ ಸ್ಟಾರ್ಸ್ಫೋರ್ಟ್ಸ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.