ಎರಡು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಟಿ20 ಏಷ್ಯಾಕಪ್ನಲ್ಲಿ ಲಯಕ್ಕೆ ಮರಳಿದರು. ಅಫ್ಘಾನಿಸ್ತಾನದ ಸ್ಥಾನದ ವಿರುದ್ಧ ಶತಕದ ಬರವನ್ನು ನೀಗಿಸಿಕೊಂಡ ಕಿಂಗ್ ಕೊಹ್ಲಿ ನಂತರ ತಮ್ಮ ಫಾರ್ಮ್ನ್ನು ಮುಂದುವರೆಸಿಕೊಂಡು ಬಂದರು. 2022 ರ ಕೊನೆಯಲ್ಲಿ ವಿರಾಟ್ ಟಿ20 ಶತಕ ಗಳಿಸಿದರೆ ನಂತರ ಭಾರತದಲ್ಲಿ ನಡೆದ ಸರಣಿಗಳಲ್ಲಿ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲೂ ಶತಕ ಗಳಿಸಿ ಮತ್ತೆ ರನ್ ಮಷಿನ್ ಎಂಬ ಪಟ್ಟವನ್ನು ಅಂಕರಿಸಿದರು.
ಈ ವರ್ಷ ಐಪಿಎಲ್ನಲ್ಲಿ ಅವರ ಬ್ಯಾಟ್ ಘರ್ಜನೆ ಮುಂದುವರೆಸಿತ್ತು. ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ 82 ರನ್ ಗಳಿಸಿ ಈ ವರ್ಷ ದೊಡ್ಡ ಮೊತ್ತವನ್ನು ಲೀಗ್ನಲ್ಲಿ ಕಲೆ ಹಾಕುವ ಮುನ್ಸೂಚನೆಯನ್ನು ಕೊಟ್ಟಿದ್ದರು. ಅದರಂತೆ 16ನೇ ಐಪಿಎಲ್ ಲೀಗ್ನಲ್ಲಿ 2 ಶತಕ ಮತ್ತು 6 ಅರ್ಧ ಶತಕಗಳನ್ನು ಅವರು ಗಳಿಸಿದರು. ಲೀಗ್ನಲ್ಲಿ 14 ಪಂದ್ಯದಲ್ಲಿ 53.25 ರ ಸರಾಸರಿಯಲ್ಲಿ 639 ರನ್ ಗಳಿಸಿದ್ದಾರೆ. ಈ ಮೂಲಕ ಅವರು ಅತಿ ಹೆಚ್ಚು ರನ್ಗಳಿಸಿದರವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದ್ದಾರೆ. ಜೂನ್ 7 ರಿಂದ 11ರ ವರೆಗೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ವಿರಾಟ್ ಮೇಲೆ ಹೆಚ್ಚಿನ ನಿರೀಕ್ಷೆ ಹೆಚ್ಚಿದೆ. ಇದಕ್ಕೆ ಕಾರಣ ಆಸಿಸ್ ವಿರುದ್ಧ ಕಿಂಗ್ ಕೊಹ್ಲಿ ಹೊಂದಿರುವ ರೆಕಾರ್ಡ್.
ಆಸಿಸ್ ವಿರುದ್ಧ ವಿರಾಟ್ ಭರ್ಜರಿ ರೆಕಾರ್ಡ್: ವಿರಾಟ್ ಕೊಹ್ಲಿಯನ್ನು ಕೆಲ ಎದುರಾಳಿ ತಂಡಗಳು ತುಂಬಾ ಇಷ್ಟಪಡುತ್ತಾರೆ. ಅದರಲ್ಲಿ ಒಂದು ಆಸ್ಟ್ರೇಲಿಯಾ. ಈವರೆಗೆ ಆಸಿಸ್ ಮೇಲೆ ವಿರಾಟ್ ಟೆಸ್ಟ್ನಲ್ಲಿ ತಮ್ಮ ಪಾರಮ್ಯವನ್ನು ಮುಂದುವರೆಸಿದ್ದಾರೆ. ಈ ಬಾರಿ ಭರ್ಜರಿ ಫಾರ್ಮ್ನಲ್ಲಿರುವ ಕಿಂಗ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಕಾಂಗರೂ ಪಡೆಯನ್ನು ಕಾಡುವುದಂತೂ ಖಂಡಿತ. ಐಪಿಎಲ್ನ ಕೊನೆಯ ಐದು ಪಂದ್ಯದಲ್ಲಿ ಎರಡರಲ್ಲಿ ಶತಕ ದಾಖಲಿಸಿ ವಿರಾಟ್ ಬಿಳಿ ಬಾಲ್ನಲ್ಲಿ ಹಿಡಿತ ಹೊಂದಿದ್ದಾರೆ. ಆದರೆ ಕೆಂಪುಬಾಲ್ನಲ್ಲಿ ಹೇಗೆ ಯಶ ಕಂಡುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.