ನವದೆಹಲಿ: ಏಕದಿನ ಕ್ರಿಕೆಟ್ಗೆ ಭಾರತ ತಂಡದ ನೂತನ ನಾಯಕರಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದು, ಸೀಮಿತ ಓವರ್ಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಯುಗ ಅಂತ್ಯವಾಗಿದೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಟ್ಮ್ಯಾನ್ ಏಕದಿನ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದು, ವಿರಾಟ್ ನೇತೃತ್ವದಲ್ಲಿ ಭಾರತ ತಂಡದ ಏಳುಬೀಳಿನ ಕುರಿತಾದ ಮಾಹಿತಿ ಇಲ್ಲಿದೆ.
2017ರಲ್ಲಿ ಭಾರತ ತಂಡದ ಪೂರ್ಣ ಸಮಯದ ನಾಯಕರಾಗಿ ಕೊಹ್ಲಿ ಅಧಿಕಾರ ವಹಿಸಿಕೊಂಡಿದ್ದರು. ಈ ಹಿಂದಿನ ಕ್ಯಾಪ್ಟನ್ ಎಂಎಸ್ ಧೋನಿ ಕೆಳಗಿಳಿದ ಬಳಿಕ ಈ ಜವಾಬ್ದಾರಿ ವಿರಾಟ್ ಹೆಗಲಿಗೇರಿತ್ತು. 95 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿರುವ ಕೊಹ್ಲಿ ಶೇಕಡಾ 70.43ರ ಜಯದ ಸರಾಸರಿಯೊಂದಿಗೆ ಭಾರತ ಕಂಡಿರುವ ಶ್ರೇಷ್ಠ ನಾಯಕರ ಸಾಲಿನಲ್ಲಿ ಅಗ್ರಗಣ್ಯರಾಗಿದ್ದಾರೆ. ಇದರಲ್ಲಿ ಟೀಂ ಇಂಡಿಯಾ 65 ಗೆಲುವು ಸಾಧಿಸಿದ್ದರೆ, 27 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಟೈ ಹಾಗೂ 2 ಪಂದ್ಯಗಳು ರದ್ದುಗೊಂಡಿವೆ.
2011ರ ಏಕದಿನ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ (ಶೇ. 59.52 ಗೆಲುವಿನ ಸರಾಸರಿ) ಮತ್ತು ಕಪಿಲ್ ದೇವ್ (54.16) ಗಿಂತ ಭಾರತದ ODI ನಾಯಕನಾಗಿ ಕೊಹ್ಲಿ ಉತ್ತಮ ಗೆಲುವಿನ ಶೇಕಡಾವಾರು ಹೊಂದಿದ್ದಾರೆ. 10ಕ್ಕೂ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಇತರ ಯಾವುದೇ ಭಾರತೀಯ ನಾಯಕರಿಗಿಂತ ಅತ್ಯುತ್ತಮ ಗೆಲುವಿನ ಸರಾಸರಿ ಕೊಹ್ಲಿಯದ್ದಾಗಿದೆ. ಮಾಜಿ ನಾಯಕರಾದ ಮೊಹಮ್ಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿ ಅವರು ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಅಲ್ಲದೆ, ಕೊಹ್ಲಿ ನಾಯಕತ್ವದಲ್ಲಿ, ಭಾರತವು 19 ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ 15ನ್ನು ಗೆದ್ದುಕೊಂಡಿದೆ. ಇದರಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿನ ಐತಿಹಾಸಿಕ ಸರಣಿ ಗೆಲುವುಗಳೂ ಸೇರಿವೆ. ಆದರೆ ಐಸಿಸಿ ಟ್ರೋಫಿಗಳನ್ನು ಗೆದ್ದುಕೊಡುವಲ್ಲಿ ಕೊಹ್ಲಿ ವಿಫಲರಾಗಿದ್ದು, ಅವರ ನಾಯಕತ್ವಕ್ಕೆ ಕಪ್ಪುಚುಕ್ಕೆಯಾಗಿದೆ. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಮತ್ತು 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ನಲ್ಲಿ ಭಾರತ ಸೋಲುಂಡಿತ್ತು. ಇತ್ತೀಚೆಗೆ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಕೂಡ ಸೋಲಿನೊಂದಿಗೆ ಅವರು ನಾಯಕತ್ವವನ್ನು ಕೊನೆಗೊಳಿಸಿದ್ದರು.