ಹೈದರಾಬಾದ್:ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಸಂಜೆ 2ನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಪಾಲಿಗೆ ಮಹತ್ವದ್ದು. ಏಕೆಂದರೆ ವೃತ್ತಿ ಜೀವನದ 500ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಲಿದ್ದು, ಕೊಹ್ಲಿ ಹೊಸ ದಾಖಲೆ ಬರೆಯುವರು. ಈ ಸಾಧನೆ ಮಾಡಿದ ವಿಶ್ವದ 10ನೇ ಮತ್ತು ಭಾರತದ 4ನೇ ಕ್ರಿಕೆಟರ್ ಎನಿಸಿಕೊಳ್ಳಲಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಎಂದೇ ಗುರುತಿಸಿಕೊಂಡಿರುವ ಕೊಹ್ಲಿ ಈವರೆಗೂ ಕ್ರಿಕೆಟ್ ಎಲ್ಲ ಮೂರು ಮಾದರಿಯಲ್ಲಿ 499 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
2008ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕೊಹ್ಲಿ 15 ವರ್ಷಗಳ ಸುದೀರ್ಘ ಕ್ರಿಕೆಟ್ ಪ್ರಯಾಣದಲ್ಲಿ ಇಂದು ದಾಖಲೆಯ ಪಂದ್ಯಕ್ಕಾಗಿ ಕ್ರೀಡಾಂಗಣಕ್ಕಿಳಿಯಲಿದ್ದಾರೆ. ಸಚಿನ್ ತೆಂಡೂಲ್ಕರ್, ಎಂ.ಎಸ್.ಧೋನಿ ಮತ್ತು ರಾಹುಲ್ ದ್ರಾವಿಡ್ ನಂತರ ಐನೂರನೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಾಲ್ಕನೇ ಭಾರತೀಯ ಆಟಗಾರ ಕೊಹ್ಲಿ.
ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಇವರು ಒಟ್ಟು 664 ಪಂದ್ಯಗಳನ್ನು ಆಡಿದ್ದಾರೆ. ನಂತರ ಶ್ರೀಲಂಕಾದ ಮಹೇಲಾ ಜಯವರ್ಧನೆ 652 ಪಂದ್ಯಗಳನ್ನಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತೀಯ ಆಟಗಾರರ ಬಗ್ಗೆ ನೋಡುವುದಾದರೆ, ಮಹೇಂದ್ರ ಸಿಂಗ್ ಧೋನಿ 538 ಮತ್ತು ರಾಹುಲ್ ದ್ರಾವಿಡ್ 509 ಪಂದ್ಯಗಳನ್ನಾಡಿದ್ದಾರೆ. ಇದೀಗ ಕೊಹ್ಲಿ ಈ ಕ್ಲಬ್ಗೆ ಸೇರ್ಪಡೆಗೊಳ್ಳಲಿದ್ದಾರೆ.