ನವದೆಹಲಿ: ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ಮಾರ್ಚ್ 4ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನದ 100ನೇ ದೀರ್ಘ ಮಾದರಿ ಪಂದ್ಯವಾಗಿದೆ. ಈ ಸಂದರ್ಭದಲ್ಲಿ ಅವರ ದೆಹಲಿಯ ರಣಜಿ ಸಹ ಆಟಗಾರ ಪುನೀತ್ ಬಿಶ್ತ್ 2006ರಲ್ಲಿ ಕರ್ನಾಟಕ ವಿರುದ್ಧ ಕೊಹ್ಲಿ ತಂದೆಯ ಸಾವಿನ ನಡುವೆಯೂ ಮೈದಾನಕ್ಕಿಳಿದು ತಮ್ಮ 152 ರನ್ಗಳ ಜೊತೆಯಾಟ ನಡೆಸಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಈ ಜೊತೆಯಾಟ ನನ್ನ ವೃತ್ತಿ ಜೀವನದಲ್ಲಿನ ಅವಿಸ್ಮರಣೀಯ ಕ್ಷಣವಾಗಿ ಉಳಿದುಕೊಂಡಿದೆ ಎಂದಿದ್ದಾರೆ.
ವಿರಾಟ್ ಕೊಹ್ಲಿ ಭಾರತ ತಂಡವನ್ನು ಪ್ರತಿನಿಧಿಸುವುದನ್ನು ನೋಡಬೇಕೆಂಬುದು ಕೊಹ್ಲಿ ತಂದೆಯ ಕೊನೆಯ ಆಸೆಯಾಗಿತ್ತು. ಆದರೆ ಮಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಮೊದಲೇ 2006 ಡಿಸೆಂಬರ್, 16ರಂದು ಪ್ರೇಮ್ ಕೊಹ್ಲಿ ನಿಧನರಾಗಿದ್ದರು.
ಅಂದು ಕರ್ನಾಟಕ ಮತ್ತು ಡೆಲ್ಲಿ ತಂಡಗಳು ರಣಜಿಯಲ್ಲಿ ಮುಖಾಮುಖಿಯಾಗಿದ್ದವು. ಪಂದ್ಯದ ಎರಡನೇ ದಿನ ಅಜೇಯ 40 ರನ್ ಗಳಿಸಿದ್ದ 17 ವರ್ಷದ ಕೊಹ್ಲಿ ಮೂರನೇ ದಿನ ತಂಡವನ್ನು ಫಾಲೋ ಆನ್ನಿಂದ ಪಾರು ಮಾಡುವ ಆಲೋಚನೆಯಲ್ಲಿದ್ದರು. ಆದರೆ ಅವರಿಗೆ ತಂದೆ ಸಾವಿನ ಸುದ್ದಿ ಆಕಾಶ ಕಳಚಿ ಬೀಳುವಂತೆ ಮಾಡಿತ್ತು. ತಮ್ಮನ್ನು ದೊಡ್ಡ ಕ್ರಿಕೆಟರ್ ಆಗಬೇಕೆಂಬ ಕನಸು ಕಂಡಿದ್ದ ತನ್ನ ತಂದೆಯ ಕೊನೆಯ ಆಸೆಯನ್ನು ಮನದಲ್ಲಿಟ್ಟುಕೊಂಡಿದ್ದ ಕೊಹ್ಲಿ ನೋವಿನಲ್ಲೂ ಮೈದಾನಕ್ಕಿಳಿದು 280 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿ ತಂಡವನ್ನು ಫಾಲೋ ಆನ್ನಿಂದ ಪಾರು ಮಾಡಿದ್ದರು. ದುಃಖದ ಸಂದರ್ಭದಲ್ಲಿಯೂ ಅವರು ಅಂದು 19 ವರ್ಷದವರಾಗಿದ್ದ ಪುನೀತ್ ಬಿಸ್ತ್ ಅವರ ಜೊತೆಗೆ 152 ರನ್ಗಳ ಜೊತೆಯಾಟ ನಡೆಸಿದ್ದರು. ಪಂದ್ಯದ ನಂತರ ತನ್ನ ತಂದೆಯ ಅಂತ್ಯ ಸಂಸ್ಕಾರಕ್ಕೆ ತೆರಳಿದಿದ್ದರು.
ಪಿಟಿಐ ಜೊತೆಗೆ 16 ವರ್ಷಗಳ ಹಿಂದಿನ ಘಟನೆಯನ್ನು ನೆನೆದಿರುವ ಬಿಶ್ತ್, ಅಂದು ಆ ಯುವ ಕೊಹ್ಲಿಯ ಮುಖದಲ್ಲಿ ಕಂಡ ನೋಟ ಎಂತಹವರಿಗೂ ಆತ ಭಾರತ ತಂಡಕ್ಕೆ ಭವಿಷ್ಯದಲ್ಲಿ ನಾಯಕನಾಗುತ್ತಾನೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು. ಏಕೆಂದರೆ ಬಾಲಕನಾಗಿದ್ದ ಸಮಯದಲ್ಲೂ ತಂದೆಯ ಸಾವಿನ ನೋವನ್ನು ಮನದಲ್ಲಿ ತುಂಬಿಕೊಂಡಿದ್ದರೂ, ಅವರು ಮಾತ್ರ ತನ್ನ ತಂಡವನ್ನು ಸೋಲಿನಿಂದ ಪಾರು ಮಾಡಲು ಹೋರಾಟ ನಡೆಸುತ್ತಿದ್ದರು ಎಂದು ಮೇಘಾಲಯ ತಂಡಕ್ಕಾಗಿ ಆಡುತ್ತಿರುವ ವಿಕೆಟ್ ಕೀಪರ್ ವಿವರಿಸಿದ್ದಾರೆ.