ಹೈದರಾಬಾದ್:ಛತ್ತೀಸ್‌ಗಢದ ಆಲ್‌ರೌಂಡರ್ ಶಶಾಂಕ್ ಸಿಂಗ್ ಬುಧವಾರ ನಡೆದ ಲಿಸ್ಟ್ ಎ ಪಂದ್ಯದಲ್ಲಿ 150 ರನ್ ಮತ್ತು 5 ವಿಕೆಟ್‌ಗಳ ಗೊಂಚಲು ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದರು. ಈ ದಾಖಲೆ ಬರೆದ ಮೊದಲ ಭಾರತೀಯ ಮತ್ತು ವಿಶ್ವದ ಮೂರನೇ ಕ್ರಿಕೆಟಿಗ ಎನಿಸಿಕೊಂಡರು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಮಣಿಪುರದ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಛತ್ತೀಸ್‌ಗಢ ತಂಡದ ಶಶಾಂಕ್ ಅಮೋಘ ಆಲ್‌ರೌಂಡರ್ ಪ್ರದರ್ಶನ ನೀಡಿದರು. ಮೊದಲು ಬ್ಯಾಟ್ ಮಾಡಿದ ಛತ್ತೀಸ್‌ಗಢ ಆರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಮೈದಾನಕ್ಕಿಳಿದ ಶಶಾಂಕ್, ಅಮನ್ದೀಪ್ ಖಾರೆ ಜೊತೆ ಸೇರಿ ಸೊಗಸಾದ ಇನಿಂಗ್ಸ್ ಕಟ್ಟಿದರು.
ಮಧ್ಯಮ ಕ್ರಮಾಂಕದ ಆಟಗಾರ ಲಿಸ್ಟ್ ಎನಲ್ಲಿ 113 ಎಸೆತಗಳಲ್ಲಿ 152 ಗಳಿಸುವ ಮೂಲಕ ಚೊಚ್ಚಲ ಶತಕ ಬಾರಿಸಿದರು. ಇದರಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳು ಇದ್ದವು. ಅತ್ತ ಖಾರೆ 88 ರನ್ ಮಾಡಿ ತಂಡಕ್ಕೆ ನೆರವಾದರು. ಇದರಿಂದ ಛತ್ತೀಸ್‌ಗಢ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 342 ರನ್ಗಳ ಬೃಹತ್ ಮೊತ್ತ ಗಳಿಸಿತು.
ಬೌಲಿಂಗ್ನಲ್ಲೂ ಮಿಂಚಿಂಗ್:ದೊಡ್ಡ ಮೊತ್ತ ಬೆನ್ನತ್ತಿದ ಮಣಿಪುರ ಉತ್ತಮ ಆರಂಭ ಪಡೆದಾಗ್ಯೂ ಮಧ್ಯಮ ಕ್ರಮಾಂಕದ ಕುಸಿತದಿಂದ ಸೋಲು ಅಬುಭವಿಸಬೇಕಾಯಿತು. ಇದಕ್ಕೆ ಪ್ರಮುಖ ಕಾರಣವಾಗಿದ್ದು, ಶಶಾಂಕ್ ಸಿಂಗ್ ಮಾರಕ ದಾಳಿ. ಪ್ರಫುಲ್ಲೋಸಿಂಗ್ 67, ಬಸೀರ್ ರೆಹಮಾನ್ 42 ರನ್ ಗಳಿಸಿ ಆಡುತ್ತಿದ್ದಾಗ ದಾಳಿಗಿಳಿದ ಶಶಾಂಕ್ ಇಬ್ಬರಿಗೂ ಪೆವಿಲಿಯನ್ ಹಾದಿ ತೋರಿಸಿದರು. ಇದಾದ ಬಳಿಕ 61 ಮಾಡಿ ಉತ್ತಮ ಇನಿಂಗ್ಸ್ ಕಟ್ಟಿದ ಲಾಂಗ್ಲೋನ್ಯಾಂಬಾ ಕೀಶಾಂಗ್ಬಾಮ್ ವಿಕೆಟ್ ಪಡೆದು ಮತ್ತೊಮ್ಮೆ ಶಾಕ್ ನೀಡಿದರು. ಕೊನೆಯಲ್ಲಿ ಮತ್ತೆರಡು ವಿಕೆಟ್ ಕಿತ್ತು ಒಟ್ಟು 5 ವಿಕೆಟ್ ಗೊಂಚಲು ಪಡೆದು ಮಿಂಚಿದರು.
ಬ್ಯಾಟಿಂಗ್ನಲ್ಲಿ ಶತಕ, ಬೌಲಿಂಗ್ನಲ್ಲಿ 5 ವಿಕೆಟ್ ಕಿತ್ತ ಮೊದಲ ಭಾರತೀಯ ಎಂಬ ದಾಖಲೆ ಬರೆದರು. ಈ ಹಿಂದೆ ಈ ದಾಖಲೆಯನ್ನು ವೆಸ್ಟ್ ಇಂಡೀಸ್ ದಿಗ್ಗಜ ಆಲ್ವಿನ್ ಕಲ್ಲಿಚರಣ್ (206 ಮತ್ತು 32ಕ್ಕೆ 6) ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಮೈಕೆಲ್ ಜಾನ್ ಪ್ರಾಕ್ಟರ್ (ಅಜೇಯ 154 ಮತ್ತು 26ಕ್ಕೆ 5) ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಂದಿದ್ದರು.
ಶಶಾಂಕ್ ಅವರು 2015 ರಲ್ಲಿ ಮೊದಲ ಲಿಸ್ಟ್ ಎ ಪಂದ್ಯವನ್ನಾಡಿದ್ದರು. ಇಲ್ಲಿಯರೆವೂ ಅವರು 27 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ. 700 ರನ್ ಗಳಿಸಿದ್ದಲ್ಲದೇ, 30 ವಿಕೆಟ್‌ಗಳನ್ನು ಗಳಿಸಿದ್ದಾರೆ. 32 ವರ್ಷದ ಅವರು 2022 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಸನ್‌ರೈಸರ್ಸ್ ಹೈದರಾಬಾದ್ ಪರ ಪಾದಾರ್ಪಣೆ ಮಾಡಿದ್ದರು.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ಎದುರಿನ ಟಿ-20, ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಔಟ್: ಕಾರಣ ಇದೆ!