ರಾಜ್ಕೋಟ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ ಮಿಂಚು ಹರಿಸಿರುವ ಮಹಾರಾಷ್ಟ್ರದ ಉದಯೋನ್ಮುಖ ಬ್ಯಾಟರ್ ಋತುರಾಜ್ ಗಾಯಕ್ವಾಡ್ ದೇಶಿಯ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.
ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿರುವ ಈ ಪ್ಲೇಯರ್ ಇಂದಿನ ಕೇರಳ ವಿರುದ್ಧದ ಪಂದ್ಯದಲ್ಲೂ ಶತಕ ಸಾಧನೆ ಮಾಡಿದ್ದಾರೆ.
2021-22ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ವಿರುದ್ಧ ಮಾಧವ್ ರಾವ್ ಸಿಂಧಿಯಾ ಸ್ಟೇಡಿಯಂ ನಡೆದ ಇಂದಿನ ಪಂದ್ಯದಲ್ಲಿ ಮಿಂಚು ಹರಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಗಾಯಕ್ವಾಡ್, ತಾವು ಎದುರಿಸಿದ 129 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಸೇರಿದಂತೆ 124ರನ್ಗಳಿಕೆ ಮಾಡಿದ್ದಾರೆ.
ಈ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಹೊರಹಾಕಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಕದ ತಟ್ಟುವ ಸಾಧ್ಯತೆ ದಟ್ಟವಾಗಿದೆ.
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿರುವ ಮಹಾರಾಷ್ಟ್ರ ಋತುರಾಜ್ ಗಾಯಕ್ವಾಡ್ ಇದೀಗ ದೇಶಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ಮುಂದುವರೆಸಿರುವ ಕಾರಣ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.
ಗಾಯಕ್ವಾಡ್ ಇದೀಗ ತಾವು ಆಡಿರುವ ಮೂರು ಪಂದ್ಯಗಳಿಂದ 414ರನ್ಗಳಿಕೆ ಮಾಡುವ ಮೂಲಕ ವಿಜಯ್ ಹಜಾರೆ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿರಿ:ವಿಜಯ ಹಜಾರೆ ಟ್ರೋಫಿಯಲ್ಲಿ ಋತುರಾಜ್ ಆರ್ಭಟ: ಸತತ 2 ಶತಕ ಸಿಡಿಸಿದ ಗಾಯಕ್ವಾಡ್