ಮುಂಬೈ:ಪುರುಷರ ಕ್ರಿಕೆಟ್ನ ಇಂಡಿಯನ್ ಪ್ರೀಮಿಯರ್ ಲೀಗ್ ಡಿಜಿಟಲ್ ಪ್ರಸಾರ ಹಕ್ಕು ಪಡೆದಿದ್ದ ವಯಾಕಾಮ್ 18 ಸಂಸ್ಥೆ, ಇದೀಗ ಮಹಿಳಾ ಐಪಿಎಲ್ನ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದೆ. ಬರೋಬ್ಬರಿ 951 ಕೋಟಿ ರೂಪಾಯಿ ಬಿಡ್ ಮಾಡಿರುವ ಸಂಸ್ಥೆ ಮೊದಲ 5 ವರ್ಷ ಗುತ್ತಿಗೆ ಪ್ರಸಾರದ ಹಕ್ಕು ತನ್ನದಾಗಿಸಿಕೊಂಡಿದೆ. ಈ ಮೂಲಕ ಬಿಸಿಸಿಐ ಪ್ರತಿ ಪಂದ್ಯಕ್ಕೆ 7.10 ಕೋಟಿ ರೂಪಾಯಿ ಗಳಿಸಲಿದೆ.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ, 2023 ರಿಂದ 2027 ರವರೆಗೆ ಮಹಿಳಾ ಐಪಿಎಲ್ನ ಮಾಧ್ಯಮಗಳ ಹಕ್ಕುಗಳು viacom 18 ಸಂಸ್ಥೆಯ ಪಾಲಾಗಿದೆ. ಇದು ಮಹಿಳಾ ಕ್ರಿಕೆಟ್ನ ಅಭ್ಯುದಯಕ್ಕೆ ನೆರವಾಗಲಿದೆ. ಇದಲ್ಲದೇ ಮಹಿಳಾ ಕ್ರಿಕೆಟ್ಗೆ ಈ ದಿನ ಮಹತ್ವದ್ದು. ಪ್ರಸಾರ ಹಕ್ಕು ಪಡೆದಿದ್ದಕ್ಕೆ ವಯಾಕಾಮ್ ಸಂಸ್ಥೆಗೆ ಅಭಿನಂದನೆಗಳು. 951 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಈ ವರ್ಷದ ಮಾರ್ಚ್ನಲ್ಲಿ ಮಹಿಳಾ ಐಪಿಎಲ್ ನಡೆಯುವ ಸಾಧ್ಯತೆಗಳಿವೆ. 2023 ರಿಂದ 2027 ರವರೆಗೆ IPL ನ ಮಾಧ್ಯಮ ಹಕ್ಕುಗಳು viacom18 ಪಡೆದುಕೊಂಡಿದ್ದು, ಭಾರತದಲ್ಲಿ ಮಹಿಳಾ ಕ್ರಿಕೆಟ್ನ ಸಬಲೀಕರಣ ಮತ್ತು ಔನ್ನತ್ಯಕ್ಕೆ ನೆರವಾಗಲಿದೆ. ಇದೊಂದು ದೊಡ್ಡ ಮತ್ತು ನಿರ್ಣಾಯಕ ನಡೆಯಾಗಿದೆ. ಮಹಿಳಾ ಐಪಿಎಲ್ ಮಾಧ್ಯಮ ಹಕ್ಕುಗಳಿಗಾಗಿ ನಡೆದ ಬಿಡ್ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಇದು ಕ್ರಿಕೆಟ್ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಶೀಘ್ರವೇ ಆಟಗಾರ್ತಿಯರ ಹರಾಜು:ಶೀಘ್ರದಲ್ಲೇ ಮಹಿಳಾ ಐಪಿಎಲ್ 2023 ಸೀಸನ್‌ಗಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಸಲಾಗುವುದು. ಮಹಿಳಾ ಐಪಿಎಲ್ ಋತುವಿನ ವೇಳಾಪಟ್ಟಿ ಕೂಡ ಇನ್ನೂ ಬಿಡುಗಡೆಯಾಗಿಲ್ಲ. ಮಹಿಳಾ ಲೀಗ್ ಈ ವರ್ಷದ ಮಾರ್ಚ್ 3 ರಿಂದ 26 ರವರೆಗೆ ನಡೆಯುವ ಸಾಧ್ಯತೆಯಿದೆ. ಈ ಋತುವಿನಲ್ಲಿ ಒಟ್ಟು 22 ಪಂದ್ಯಗಳು ನಡೆಸಲು ಯೋಜಿಸಲಾಗಿದೆ. ಇದೇ ಜನವರಿ 25 ರಂದು ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ನ 5 ಫ್ರಾಂಚೈಸಿಗಳನ್ನು ಅನಾವರಣಗೊಳಿಸಲಿದೆ.