ನವದೆಹಲಿ:ಭಾರತೀಯ ಕ್ರಿಕೆಟ್ ಪ್ರಸಾರ ಕ್ಷೇತ್ರದಲ್ಲಿ ವಯಾಕಾಮ್-18 ಹೊಸ ದಾಖಲೆ ಸೃಷ್ಟಿಸಿದೆ. ಮುಂದಿನ ಐದು ವರ್ಷಗಳ ಕಾಲ ತವರಿನಲ್ಲಿ ನಡೆಯುವ ಸರಣಿಗಳ ನೇರಪ್ರಸಾರದ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ಸುಮಾರು 6,000 ಕೋಟಿ ರೂ.ಗಳಿಗೆ ತನ್ನ ತೆಕ್ಕೆಗೆ ವಯಾಕಾಮ್ ತೆಗೆದುಕೊಂಡಿದೆ. ಈ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಉಂಟಾಗಿದ್ದ ತ್ರಿಕೋನ ಸ್ಪರ್ಧೆಯಲ್ಲಿ ಸ್ಟಾರ್ ಇಂಡಿಯಾ ಮತ್ತು ಸೋನಿಯನ್ನು ಹಿಂದಿಕ್ಕಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಟಿವಿ ಮತ್ತು ಡಿಜಿಟಲ್ ಎರಡಕ್ಕೂ ಪ್ರತ್ಯೇಕ ಇ-ಬಿಡ್‌ಗಳನ್ನು ಆಹ್ವಾನಿಸಿತ್ತು. ವಯಾಕಾಮ್-18 ಸಂಸ್ಥೆಯು ಡಿಜಿಟಲ್ ಹಕ್ಕುಗಳನ್ನು ಅಂದಾಜು 3,101 ಕೋಟಿ ರೂಪಾಯಿ ಹಾಗೂ ಟಿವಿ ಹಕ್ಕುಗಳನ್ನು 2,862 ಕೋಟಿ ರೂ.ಗೆ ಖರೀದಿಸಿದೆ.
ಸೆಪ್ಟೆಂಬರ್ 22ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಟೀಂ ಇಂಡಿಯಾದ ಮೂರು ಪಂದ್ಯಗಳ ಸ್ವದೇಶಿ ಸರಣಿಯಿಂದ 2028ರ ಮಾರ್ಚ್ 31ರವರೆಗೆ ಇದು ಜಾರಿ ಇರುತ್ತದೆ. ಐಪಿಎಲ್ ಡಿಜಿಟಲ್ ಹಕ್ಕುಗಳನ್ನು 26,000 ಕೋಟಿ ರೂ.ಗೆ ಖರೀದಿಸಿರುವ ವಯಾಕಾಮ್, ಈಗ ಐಪಿಎಲ್ (ಟಿವಿ) ಮತ್ತು ಐಸಿಸಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಉನ್ನತ ಮಟ್ಟದ ಕ್ರಿಕೆಟ್ ಪ್ರಸಾರ ಹಕ್ಕಗಳನ್ನು ಹೊಂದಿದಂತಾಗಿದೆ ಎಂದು ವರದಿಯಾಗಿದೆ.
"ಮುಂದಿನ 5 ವರ್ಷಗಳವರೆಗೆ ಲೀನಿಯರ್ ಮತ್ತು ಡಿಜಿಟಲ್ ಎರಡಕ್ಕೂ ಬಿಸಿಸಿಐ ಮಾಧ್ಯಮ ಹಕ್ಕುಗಳನ್ನು ಗೆದ್ದಿದ್ದಕ್ಕಾಗಿ ವಯಾಕಾಮ್-18ಗೆ ಅಭಿನಂದನೆಗಳು. ಪುರುಷರ ಐಪಿಎಲ್ ಮತ್ತು ಮಹಿಳಾ ಐಪಿಎಲ್ ನಂತರ ಭಾರತ ಕ್ರಿಕೆಟ್ ಎರಡೂ ಕ್ಷೇತ್ರಗಳಲ್ಲೂ ವೃದ್ಧಿಸುತ್ತಿದೆ. ನಾವು ಬಿಸಿಸಿಐ ಮಾಧ್ಯಮ ಹಕ್ಕುಗಳ ಪಾಲುದಾರಿಕೆಯನ್ನೂ ವಿಸ್ತರಿಸುತ್ತೇವೆ" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಐದು ವರ್ಷದ ಅವಧಿಯಲ್ಲಿ ತವರಿನಲ್ಲಿ ಟೀಂ ಇಂಡಿಯಾವು 25 ಟೆಸ್ಟ್‌ಗಳು, 27 ಏಕದಿನಗಳು ಮತ್ತು 36 ಟಿ-20 ಪಂದ್ಯಗಳು ಸೇರಿದಂತೆ ಮೂರು ಸ್ವರೂಪದ ಕ್ರಿಕೆಟ್ನಲ್ಲಿ ಒಟ್ಟು 88 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಆಸ್ಟ್ರೇಲಿಯಾ-21, ಇಂಗ್ಲೆಂಡ್-18, ನ್ಯೂಜಿಲೆಂಡ್-11, ದಕ್ಷಿಣ ಆಫ್ರಿಕಾ-10, ವೆಸ್ಟ್ ಇಂಡೀಸ್-10, ಅಫ್ಘಾನಿಸ್ತಾನ-7, ಶ್ರೀಲಂಕಾ-6 ಹಾಗೂ ಬಾಂಗ್ಲಾದೇಶದ ವಿರುದ್ಧದ 5 ಪಂದ್ಯಗಳು ಸೇರಿವೆ. ಈ ಬಾರಿ ಒಪ್ಪಂದದ ಪ್ರಕಾರ ಪ್ರತಿ ಪಂದ್ಯದ ಮೌಲ್ಯ ಸುಮಾರು 67.76 ಕೋಟಿ ರೂ. ಆಗಿದೆ. ಕಳೆದ ಋತುವಿನಲ್ಲಿ ಪ್ರತಿ ಪಂದ್ಯದ ಮೌಲ್ಯದ 60 ಕೋಟಿ ರೂ. ಇತ್ತು. ಇದಕ್ಕೆ ಹೋಲಿಸಿದರೆ ಸುಮಾರು 7.76 ಕೋಟಿ ರೂ. ಅಧಿಕವಾಗಿದೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಹಾಕಿ ಆಟಗಾರರಿಗೆ ಬೆಂಗಳೂರಿನಲ್ಲಿ ವಿಶೇಷ ಬೀಳ್ಕೊಡುಗೆ