ಭಾರತ ತಂಡದ ಆರಂಭಿಕ ಆಟಗಾರ ಹಾಗೂ ಟೆಸ್ಟ್ ಉಪನಾಯಕ ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ಟೀಕಾಪ್ರಹಾರ ನಡೆಸುತ್ತಿರುವ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಈ ಕುರಿತಂತೆ ಸರಣಿ ಟ್ವೀಟ್ಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ''ಕ್ರಿಕೆಟಿಗ ಕೆಎಲ್ ರಾಹುಲ್ ವಿರುದ್ಧ ನನಗೆ ವೈಯಕ್ತಿಕವಾಗಿ ಏನಾದರೂ ಇದೆ ಎಂದು ಕೆಲವರು ಭಾವಿಸುತ್ತಿದ್ದಾರೆ. ಆದರೆ ಹಾಗೇನು ಇಲ್ಲ. ನಾನು ರಾಹುಲ್ಗೆ ಒಳ್ಳೆಯದಾಗಲಿ ಎಂದೇ ಬಯಸುತ್ತೇನೆ. ಅಲ್ಲದೆ, ಇಂತಹ ಫಾರ್ಮ್ನೊಂದಿಗೆ ಆಡುವುದರಿಂದ ಆತ್ಮವಿಶ್ವಾಸ ಬರುವುದಿಲ್ಲ. ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಸ್ಥಾನ ಮರಳಿ ಪಡೆಯಲು ದೇಶಿ ಕ್ರಿಕೆಟ್ ಋತು ಸಹ ಮುಗಿದಿದೆ'' ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
''ರಾಹುಲ್ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಬೇಕು, ಅಲ್ಲಿ ರನ್ ಗಳಿಸಿ ತಂಡದಲ್ಲಿ ಮತ್ತೆ ಸ್ಥಾನ ಪಡೆಯಬೇಕು. ಈ ಹಿಂದೆ ಪೂಜಾರ ಕೂಡ ಅವರನ್ನು ತಂಡದಿಂದ ಕೈಬಿಟ್ಟಾಗ ಹಾಗೆಯೇ ಮಾಡಿದ್ದರು. ದೇಶಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಲು ಮತ್ತು ಫಾರ್ಮ್‌ಗೆ ಮರಳಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದೇ ಸದ್ಯದ ಸ್ಥಿತಿಗೆ ಉತ್ತಮ ಉತ್ತರ ಆಗಲಿದೆ. ಆದರೆ ಅದಕ್ಕಾಗಿ ಐಪಿಎಲ್‌ನಿಂದ ಹೊರಗೆ ಉಳಿಯುವುದು ಸಾಧ್ಯವೇ?'' ಎಂದು ವೆಂಕಟೇಶ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಈ ನಡುವೆ ವೆಂಕಿ ಟ್ವೀಟ್ವೊಂದಕ್ಕೆ ರೀಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, ''ಕೆಎಲ್ ರಾಹುಲ್ ಇರಾನಿ ಕಪ್ ಆಡಲಿದ್ದಾರೆ. ತಾಂತ್ರಿಕವಾಗಿ ಕೆಎಲ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರಿಗೆ ಮಾನಸಿಕವಾಗಿ ಗೊಂದಲ ಇದೆ. ಚಡಪಡಿಕೆ ಮತ್ತು ದ್ವಂದ್ವ ಮನಸ್ಸಿಗೆ ಸಿಲುಕಿದ್ದಾರೆ. ಎಲ್ಲವೂ ಸರಿಹೋಗಲಿದೆ. ಇದೊಂದು ಕೆಲ ಸಮಯದ ವಿಚಾರವಷ್ಟೇ. ಕೌಂಟಿ ಆಡುವುದರಿಂದ ಫಾರ್ಮ್‌ಗೆ ನೆರವಾಗಲಿದೆ ಎಂದು ಅನ್ನಿಸುತ್ತಿಲ್ಲ. ರಾಹುಲ್ಗೆ ವಿಶ್ರಾಂತಿ ಬೇಕಿದೆ'' ಎಂದು ದೊಡ್ಡ ಗಣೇಶ್ ಹೇಳಿದ್ದಾರೆ.
ಇನ್ನೊಂದೆಡೆ ರಾಹುಲ್ ಫಾರ್ಮ್ ಬಗ್ಗೆ ಕಿಡಿಕಾರುತ್ತಿರುವ ವೆಂಕಟೇಶ್ ಪ್ರಸಾದ್ ಕುರಿತಂತೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದರು. ''ವೆಂಕಿ ಭಾಯ್, ಟೆಸ್ಟ್ ಪಂದ್ಯ ನಡೆಯುತ್ತಿದೆ. ಕನಿಷ್ಠ, ಎರಡೂ ಇನ್ನಿಂಗ್ಸ್ ಮುಗಿಯುವ ಹಂತದಲ್ಲಿದೆ. ನಾವೆಲ್ಲರೂ ಒಂದೇ ತಂಡದ ಪರ ಅಂದರೆ ಟೀಮ್ ಇಂಡಿಯಾದಲ್ಲಿದ್ದೇವೆ. ನಿಮ್ಮ ಆಲೋಚನೆಗಳನ್ನು ತಡೆದುಕೊಳ್ಳಿ ಎಂದು ನಿಮ್ಮನ್ನು ಕೇಳುತ್ತಿಲ್ಲ, ಆದರೆ ಬೇರೆ ಸಮಯದಲ್ಲಿ ಹೇಳಿದ್ದರೆ ಉತ್ತಮ ಎನಿಸುತ್ತದೆ. ಇದೆಲ್ಲದರ ನಡುವೆ ನಮ್ಮ ಆಟವು ‘ಟೈಮಿಂಗ್’ ಮೇಲೆಯೇ ನಿರ್ಧಾರಿತ ಎಂದು ಆಕಾಶ್ ಚೋಪ್ರಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವೆಂಕಟೇಶ್ ಪ್ರಸಾದ್, ''ಪರವಾಗಿಲ್ಲ ಆಕಾಶ್, ನನ್ನ ದೃಷ್ಟಿಯಲ್ಲಿ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿದರೂ, ನನ್ನ ಟೀಕೆಯು ತುಂಬಾ ನ್ಯಾಯಯುತವಾಗಿದೆ. ಪಂದ್ಯದ ನಡುವೆ ಅಥವಾ ಪಂದ್ಯದ ನಂತರ ಎಂಬುದು ಇಲ್ಲಿ ಅಪ್ರಸ್ತುತ. ಯೂಟ್ಯೂಬ್ನಲ್ಲಿ ನಿಮ್ಮ ಸುಂದರ ವಿಡಿಯೋಗಳಿಗಾಗಿ ಶುಭಾಶಯಗಳು, ನಾನು ಅವುಗಳನ್ನು ನೋಡಿ ಆನಂದಿಸುತ್ತೇನೆ'' ಎಂದು ಟಾಂಗ್ ನೀಡಿದ್ದರು.