ಮುಂಬೈ: 2021ರ ಎರಡನೇ ಹಂತದಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಮಧ್ಯಪ್ರದೇಶದ ಯುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಭಾರತದ ತಂಡದ ಬಹುದೊಡ್ಡ ಕೊರತೆಯಾಗಿರುವ ಬ್ಯಾಟಿಂಗ್ ಆಲರೌಂಡರ್ ಸ್ಥಾನಕ್ಕೆ ಅದ್ಭುತ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ.
ಐಪಿಎಲ್ನ ದುಬೈ ಲೆಗ್ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಫೈನಲ್ ಪ್ರವೇಶಿಸಲು ನೆರವಾಗಿದ್ದ ವೆಂಕಟೇಶ್ ಅಯ್ಯರ್, ನಂತರ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ನಲ್ಲೂ ಉತ್ತಮ ಆಲ್ರೌಂಡರ್ ಪ್ರದರ್ಶನ ತೋರಿ ಕಿವೀಸ್ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ವಿಜಯ ಹಜಾರೆಯಲ್ಲಿ ಫಿನಿಶಿಂಗ್ ಜವಾಬ್ದಾರಿ
2021-22ರ ವಿಜಯ್ ಹಜಾರೆ ಟ್ರೋಫಿಯಲ್ಲಿ ವೆಂಕಟೇಶ್ ಅಯ್ಯರ್ 4 ಪಂದ್ಯಗಳಿಂದ 136ರ ಸ್ಟ್ರೈಕ್ರೇಟ್ನಲ್ಲಿ 348 ರನ್ಸಿಡಿಸಿ ಅಬ್ಬರಿಸಿದ್ದಾರೆ. ಭಾನುವಾರ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಮಧ್ಯಪ್ರದೇಶ 56ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಅಯ್ಯರ್ 113 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 8 ಬೌಂಡರಿಗಳಿಂದ 151 ರನ್ ಚಚ್ಚಿದ್ದರು. ಬೌಲಿಂಗ್ನಲ್ಲಿ 2 ವಿಕೆಟ್ ಪಡೆದಿದ್ದರು.
ಇದಲ್ಲದೇ ಉತ್ತರಖಂಡದ ವಿರುದ್ಧ 49 ಎಸೆತಗಳಲ್ಲಿ 71 ಮತ್ತು 2 ವಿಕೆಟ್, ಕೇರಳ ವಿರುದ್ಧ 84 ಎಸೆತಗಳಲ್ಲಿ 112 ರನ್ ಮತ್ತು 3 ವಿಕೆಟ್, ಮಹಾರಾಷ್ಟ್ರ ವಿರುದ್ಧ 14 ರನ್ ಮತ್ತು 1 ವಿಕೆಟ್ ಪಡೆದು ಮಿಂಚಿದ್ದಾರೆ.