ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್-4 ಪಂದ್ಯಕ್ಕೆ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಂಸಿಸಿ) ಮೀಸಲು ದಿನವನ್ನು ನಿಗದಿಪಡಿಸಿದ್ದು ಈ ನಿರ್ಧಾರಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಕಿಡಿ ಕಾರಿದ್ದಾರೆ. ಸೆಪ್ಟೆಂಬರ್ 10 ಶ್ರೀಲಂಕಾದ ಕೊಲಂಬೊದಲ್ಲಿ ಈ ಮಹತ್ವದ ಪಂದ್ಯ ನಡೆಯಲಿದ್ದು ಅಲ್ಲಿನ ಹವಾಮಾನವನ್ನು ಪರಿಗಣಿಸಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೀಸಲು ದಿನವನ್ನು ನಿಗದಿಪಡಿಸಿದೆ. ಆದರೆ, ಈ ನಿರ್ಧಾರಕ್ಕೆ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ವೆಂಕಟೇಶ್ ಪ್ರಸಾದ್ ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 10(ಭಾನುವಾರ) ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಾತ್ರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ಮೀಸಲು ದಿನವನ್ನು ಘೋಷಿಸಿದೆ. ನಿಗದಿಯಂತೆ ನಡೆಯಬೇಕಿರುವ ಪಂದ್ಯಕ್ಕೆ ಒಂದು ವೇಳೆ ಮಳೆ ಅಡ್ಡಿಯಾದರೆ, ಪಂದ್ಯ ಎಲ್ಲಿ ಸ್ಥಗಿತವಾಗಿದೆಯೋ ಅಲ್ಲಿಂದಲೇ ಮರುದಿನ (ಸೆಪ್ಟೆಂಬರ್ 11) ಮತ್ತೆ ಪುನಾರಂಭವಾಗಲಿದೆ. ಈ ನಿರ್ಧಾರಕ್ಕೆ ಪ್ರಸಾದ್ ಕಿಡಿಕಾರಿದ್ದಾರೆ. "ಇದೊಂದು ಇಬ್ಬಗೆಯ ನಿರ್ಧಾರ. ಕೇವಲ ಎರಡು ತಂಡಗಳಿಗೆ ವಿಭಿನ್ನ ನಿಯಮಗಳನ್ನು ಹೊಂದಿರುವುದು ಅನೈತಿಕವಾಗಿದೆ" ಎಂದು ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಇದು ಸಂಪೂರ್ಣ ನಾಚಿಕೆಗೇಡಿನ ಸಂಗತಿಯಾಗಿದೆ. ಆಯೋಜಕರು ಇಂತಹದ್ದೊಂದು ನಿರ್ಧಾರದವನ್ನು ತೆಗೆದುಕೊಳ್ಳುವ ಮೂಲಕ ಅಪಹಾಸ್ಯ ಮಾಡಿದ್ದಾರೆ. ಇತರ ಎರಡು ತಂಡಗಳಿಗೆ ವಿಭಿನ್ನ ನಿಯಮಗಳೊಂದಿಗೆ ಪಂದ್ಯಾವಳಿಯನ್ನು ನಡೆಸುವುದು ಅನೈತಿಕಕ್ಕೆ ಸಮ. ನ್ಯಾಯದ ಹೆಸರಿನಲ್ಲಿ ಪಂದ್ಯವನ್ನು ಮೊದಲ ದಿನಕ್ಕೆ ಸೀಮಿತಗೊಳಿಸಿದರೆ ಮಾತ್ರ ನ್ಯಾಯಸಮ್ಮತವಾಗುತ್ತದೆ. ಎರಡನೇ ದಿನದಲ್ಲಿ ಹೆಚ್ಚು ಮಳೆಯಾದರೆ ಈ ದುರುದ್ದೇಶಪೂರಿತ ಯೋಜನೆಗಳು ಯಶಸ್ವಿಯಾಗದು" ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಬಾಂಗ್ಲಾದೇಶದ ಮುಖ್ಯ ತರಬೇತುದಾರ ಚಂಡಿಕಾ ಹತುರುಸಿಂಘ ಅವರು, "ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ಹೊಂದಿರುವುದು ಸಮಂಜಸವಲ್ಲ. ಕೊಲಂಬೊಗೆ ಮಳೆ ಮುನ್ಸೂಚನೆ ಇರುವುದರಿಂದ ತಮ್ಮ ತಂಡವು ಮೀಸಲು ದಿನದ ಪ್ರಯೋಜನವನ್ನು ಪಡೆಯಲು ಇಷ್ಟಪಡುತ್ತದೆ" ಎಂದು ಹೇಳಿದ್ದರು.