ಗಯಾನ: ಕೋವಿಡ್ ಭೀತಿಯ ನಡುವೆಯೂ ವೆಸ್ಟ್ ಇಂಡೀಸ್ನಲ್ಲಿ ಇಂದಿನಿಂದ ಅಂಡರ್-19 ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಮೊದಲ ಬಾರಿಗೆ ವಿಂಡೀಸ್ ಆತಿಥ್ಯ ವಹಿಸಿದ್ದು, 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಇಂದಿನ ಮೊದಲ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಕಾದಾಡಲಿದೆ. ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.
ಅಭ್ಯಾಸ ಪಂದ್ಯದಲ್ಲಿ ಭಾರತದೆದುರು ಹೀನಾಯ ಸೋಲು ಕಂಡಿರುವ ಆಸ್ಟ್ರೇಲಿಯಾ ತಮ್ಮ ತಪ್ಪು ತಿದ್ದುಕೊಂಡು ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಕಿರಿಯರ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದೆ. 1988, 2002 ಮತ್ತು 2010ರಲ್ಲಿ ವಿಶ್ವಕಪ್ ಎತ್ತಿ ಹಿಡಿದಿದ್ದ ಆಸೀಸ್ 2 ಬಾರಿ ರನ್ನರ್ ಅಪ್ ಆಗಿದೆ.
2004ರಲ್ಲಿ ರನ್ನರ್ ಅಪ್ ಅಗಿದ್ದ ವೆಸ್ಟ್ ಇಂಡೀಸ್ 2016ರಲ್ಲಿ ಭಾರತ ತಂಡವನ್ನು ಮಣಿಸಿ ಮೊದಲ ಬಾರಿ ಚಾಂಪಿಯನ್ ಆಗಿತ್ತು. ಇದೀಗ ತವರಿನ ಲಾಭ ಪಡೆಯುವ ಆಲೋಚನೆಯಲ್ಲಿದೆ.