ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ಆಟಗಾರರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಲಂಡನ್ನ 10 ಡೌನಿಂಗ್ ಸ್ಟ್ರೀಟ್ನಲ್ಲಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ಕೆಲಕಾಲ ಪ್ರಧಾನಿ ಹಾಗೂ ಆಟಗಾರರು ಕ್ರಿಕೆಟ್ ಆಡುವ ಮೂಲಕ ಎಂಜಾಯ್ ಮಾಡಿದ್ದಾರೆ. ಎಡಗೈ ಆಲ್ರೌಂಡರ್ ಸ್ಯಾಮ್ ಕರನ್ ಬೌಲಿಂಗ್ ಎದುರಿಸಿದ ಸುನಕ್ ಉತ್ತಮ ಬ್ಯಾಟಿಂಗ್ ಕೌಶಲ್ಯ ತೋರಿದರು. ವೇಗಿ ಕ್ರಿಸ್ ಜೋರ್ಡನ್ ಕೂಡ ಬೌಲಿಂಗ್ ಮಾಡಿದ್ದು, ಈ ವೇಳೆ ಸುನಕ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ದೇಶದ ಪ್ರಧಾನಿಯನ್ನು ಔಟ್ ಮಾಡಿದ ಜೋರ್ಡನ್ ಸಂಭ್ರಮಪಟ್ಟರು.
ಜೋರ್ಡನ್ ಖುಷಿಯಲ್ಲಿ ಜಿಗಿದಾಡಿದರೆ, ಪ್ರಧಾನಿ ಸುನಕ್ ಕೂಡ ನಕ್ಕು ನಲಿದರು. ಪ್ರಧಾನಿ ಹಾಗೂ ಕ್ರಿಕೆಟಿಗರ ಕೆಲಸಮಯದ ಮೋಜಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವೇಳೆ ಇಂಗ್ಲೆಂಡ್ ಟಿ20 ವಿಜೇತ ನಾಯಕ ಜೋಸ್ ಬಟ್ಲರ್, ಪಂದ್ಯಾವಳಿಯಲ್ಲಿ ಭಾಗಿಯಾದ ಆಟಗಾರರಾದ ಸ್ಯಾಮ್ ಕರನ್, ವೇಗಿ ಕ್ರಿಸ್ ಜೋರ್ಡನ್ ಜೊತೆಗೆ ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲನ್, ಫಿಲ್ ಸಾಲ್ಟ್, ಕ್ರಿಸ್ ವೋಕ್ಸ್, ರಿಚರ್ಡ್ ಗ್ಲೀಸನ್ ಮತ್ತು ಟೈಮಲ್ ಮಿಲ್ಸ್ ಇದ್ದರು.
ಪ್ರಧಾನಿ ಭೇಟಿ ಬಗ್ಗೆ ಜೋಶ್ ಬಟ್ಲರ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. 'ಟಿ20 ವಿಶ್ವಕಪ್ ಟ್ರೋಫಿಯನ್ನು ಕೆಲ ಸಹ ಆಟಗಾರರೊಂದಿಗೆ 10 ಡೌನಿಂಗ್ ಸ್ಟ್ರೀಟ್‌ಗೆ ತೆಗೆದುಕೊಂಡು ಹೋಗಿದ್ದು ಬಹಳ ವಿಶೇಷವಾಗಿತ್ತು!" ಎಂದು ಬಟ್ಲರ್ ಶೀರ್ಷಿಕೆ ನೀಡಿದ್ದಾರೆ. ಆಲ್ರೌಂಡರ್ ಸ್ಯಾಮ್ ಕರನ್ ಕೂಡ ಪ್ರಧಾನಿ ರಿಷಿ ಸುನಕ್ ಜೊತೆ ಆಟವಾಡಿದ ವಿಡಿಯೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದಾರೆ.
ಅಲ್ಲದೆ ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ರಿಷಿ ಸುನಕ್, '10 ಡೌನಿಂಗ್ ಸ್ಟ್ರೀಟ್‌ನ ಉದ್ಯಾನದಲ್ಲಿ ಜೋಸ್ ಬಟ್ಲರ್ ಮತ್ತು ಇಂಗ್ಲೆಂಡ್ ತಂಡದೊಂದಿಗೆ ಕೆಲವು ಚೆಂಡುಗಳನ್ನು ಬಾರಿಸಿದ್ದು ನಿಜಕ್ಕೂ ರೋಮಾಂಚನವಾಗಿತ್ತು. ಕಳೆದ ಬೇಸಿಗೆಯಲ್ಲಿನ ಟಿ20 ವಿಶ್ವಕಪ್ ಗೆಲುವಿಗಾಗಿ ನಾನು ತಂಡವನ್ನು ಅಭಿನಂದಿಸಿದ್ದೇನೆ. ಜೊತೆಗೆ ace.programmeನ ಆಟಗಾರರ ಜೊತೆ ನಾವು ಮೈದಾನದಲ್ಲಿ ಆಡಿದ್ದೇವೆ. ಈ ಚಾರಿಟಿಯು ಹೆಚ್ಚಿನ ಕಪ್ಪು ಆಟಗಾರರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ನೀಡುವತ್ತ ಕೆಲಸ ಮಾಡುತ್ತಿದೆ' ಎಂದಿದ್ದಾರೆ.