ಲಂಡನ್: ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಸಾಂಪ್ರದಾಯಿಕ ಆ್ಯಶಸ್ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ಸರ್ಕಾರ ಕೋವಿಡ್ ಬಿಕ್ಕಟ್ಟಿನ ನೆಪವೊಡ್ಡಿ ಇಂಗ್ಲೆಂಡ್ ಕ್ರಿಕೆಟಿಗರ ಕುಟುಂಬಸ್ಥರು ದೇಶಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಿದೆ.
ಆದರೆ ಆಟಗಾರರ ಹಿತದೃಷ್ಟಿಯಿಂದ ಕುಟುಂಬಸ್ಥರಿಗೂ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಿಕೊಡಬೇಕೆಂದು ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಆಸ್ಟ್ರೇಲಿಯಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಕೋವಿಡ್ ಸಾಂಕ್ರಾಮಿಕ ಕಾರಣದಿಂದ ಆಸ್ಟ್ರೇಲಿಯಾ ಸರ್ಕಾರ ಕಠಿಣ ಪ್ರಯಾಣ ನಿರ್ಬಂಧಗಳನ್ನು ವಿಧಿಸಿದೆ. ಈ ನಿರ್ಬಂಧಗಳ ಪ್ರಕಾರ, ಕೇವಲ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಕುಟುಂಬ ಸದಸ್ಯರಿಗೆ ವಿಧಿಸಿರುವ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿರುವ ಇಂಗ್ಲೆಂಡ್ನ 10 ಕ್ರಿಕೆಟಿಗರು ನಿಯಮ ಬದಲಿಸದಿದ್ದರೆ, ನಾವು ಆ್ಯಶಸ್ ಆಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದರ ಜೊತೆಗೆ ಸ್ವದೇಶಿ ಕ್ರಿಕೆಟಿಗರ ಬೆನ್ನಿಗೆ ನಿಂತಿರುವ ಪ್ರಧಾನಿ ಬೋರಿಸ್ ಜಾನ್ಸನ್, ಕ್ರಿಸ್ಮನ್ ಸಮಯದಲ್ಲಿ ಕುಟುಂಬದಿಂದ ದೂರವಿರುವುದರಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡುವುದಕ್ಕಾಗಿ ಆಟಗಾರರೊಂದಿಗೆ ಕುಟುಂಬ ಸದಸ್ಯರು ಪ್ರಯಾಣಿಸಲು ಅವಕಾಶ ನೀಡಬೇಕೆಂದು ಆಸ್ಟ್ರೇಲಿಯಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ರಾಜತಾಂತ್ರಿಕರ ಭೇಟಿಯ ವೇಳೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೊಂದಿಗೆ ಜಾನ್ಸನ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಉಭಯ ದೇಶಗಳ ಮಾಧ್ಯಮಗಳು ವರದಿ ಮಾಡಿದಂತೆ, ಮಾರಿಸನ್ ಶೀಘ್ರದಲ್ಲೇ ಈ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
'ನಾನು ಈ ವಿಚಾರವನ್ನು ಮಾರಿಸನ್ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಆಟಗಾರರೊಂದಿಗೆ ಕುಟುಂಬ ಸದಸ್ಯರು ಪ್ರಯಾಣಿಸಲು ಪೂರಕ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಕ್ರಿಸ್ಮಸ್ ಸಮಯದಲ್ಲಿ ತಮ್ಮ ಕುಟುಂಬದಿಂದ ದೂರ ಉಳಿಯುವುದು ಕ್ರಿಕೆಟಿಗರಿಗೆ ಕಠಿಣವಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಆದಷ್ಟು ಬೇಗ ಇದಕ್ಕೆ ಪರಿಹಾರ ಹುಡುಕುವ ಭರವಸೆ ನೀಡಿದ್ದಾರೆ' ಎಂದು ಜಾನ್ಸನ್ ವಾಷಿಂಗ್ಟನ್ನಲ್ಲಿ ವರದಿಗಾರರಿಗೆ ಹೇಳಿದರು.
ಇದನ್ನೂ ಓದಿ: ಟಿ20 ಜೊತೆಗೆ ODI ನಾಯಕತ್ವವನ್ನೂ ತ್ಯಜಿಸುವಂತೆ 6 ತಿಂಗಳ ಹಿಂದೆಯೇ ಕೊಹ್ಲಿಗೆ ಸಲಹೆ ನೀಡಿದ್ರಂತೆ ಶಾಸ್ತ್ರಿ!