ನವದೆಹಲಿ :ಟೀಂ ಇಂಡಿಯಾದ ಯುವ ವೇಗಿ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಮತ್ತು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಕೋವಿಡ್-19ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆ ಮಿಶ್ರಾಗೆ ಸೋಂಕು ತಗುಲಿತ್ತು. ಐಪಿಎಲ್ ಅಮಾನತಾಗಿ ಕೆಲ ದಿನಗಳಲ್ಲಿ ಪ್ರಸಿದ್ಧ್‌ಗೂ ಕೊರೊನಾ ವಕ್ಕರಿಸಿತ್ತು.
ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಪ್ರಸಿದ್ಧ್ ಕೃಷ್ಣ ಆಡುತ್ತಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅಮಿತ್ ಮಿಶ್ರಾ ಆಡುತ್ತಿದ್ದಾರೆ. ಪ್ರಸಿದ್ಧ್ ಕೃಷ್ಣಗೆ ನೆಗಟಿವ್ ಬಂದಿರುವುದರಿಂದ ಅವರು ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ ಗುಣಮುಖರಾಗಿರುವ ಬಗ್ಗೆ ಬಿಸಿಸಿಐ ಮೂಲಗಳು ತಿಳಿಸಿವೆ. ತನಗೆ ಕೋವಿಡ್ ನೆಗೆಟಿವ್ ಬಂದಿದೆ ಎಂದು ಅಮಿತ್ ಮಿಶ್ರಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
'ಕೋವಿಡ್ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಸಿಬ್ಬಂದಿ ರಿಯಲ್ ಹೀರೋಗಳು. ಫ್ರಂಟ್‌ಲೈನ್ ವರ್ಕರ್‌ಗಳಿವರು. ನನ್ನ ಚೇತರಿಕೆಗೆ ಇವರೆಲ್ಲರೂ ಕಾರಣಕರ್ತರು.
ಇವರ ಕೆಲಸವನ್ನು ನಾನು ಅಭಿನಂದಿಸುತ್ತೇನೆ' ಎಂದು ಬರೆದು ವೈದ್ಯಾಧಿಕಾರಿಗಳ ಫೋಟೋ ಹಾಕಿ ಅಮಿತ್ ಮಿಶ್ರಾ ಟ್ವೀಟ್ ಮಾಡಿದ್ದಾರೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ, ಇಂಗ್ಲೆಂಡ್‌ಗೆ ಪ್ರವಾಸ ಬೆಳಸಲಿರುವ ಭಾರತ ತಂಡದ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ಜೂನ್ 2ಕ್ಕೆ ಇಂಗ್ಲೆಂಡ್ ತಲುಪಲಿರುವ ಭಾರತ ತಂಡ ಅಲ್ಲಿ 10 ದಿನಗಳ ಕ್ವಾರಂಟೈನ್ ಬಳಿಕ ಜೂನ್ 18-22ರವರೆಗೆ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದೆ. ನಂತರ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.