ಆಂಟಿಗುವಾ: ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 96 ರನ್ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಟೀಂ ಇಂಡಿಯಾ ಫೈನಲ್ಗೆ ಲಗ್ಗೆ ಇಟ್ಟಿದೆ. ಈ ಮೂಲಕ ನಾಯಕ ಯಶ್ ಧುಲ್ ಟೀಂ ಟ್ರೋಫಿ ಗೆಲ್ಲುವ ಹಂತಕ್ಕೆ ತಲುಪಿದೆ. ಫೆ.5 ರಂದು ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಭಾರತ, ಇಂಗ್ಲೆಂಡ್ ಸೆಣಸಲಿವೆ.
ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಒದಗಿಸಿಕೊಡುವಲ್ಲಿ ಆರಂಭಿಕರು ವಿಫಲರಾದರು. ಟೂರ್ನಿಯಲ್ಲಿ ಭಾರತದ ಟಾಪ್ ಬ್ಯಾಟರ್ ಆಗಿದ್ದ ರಘುವಂಶಿ ಇಂದು 30 ಎಸೆತಗಳನ್ನೆದುರಿಸಿ ಕೇವಲ 6 ರನ್ಗಳಿಸಿದರೆ, ಹರ್ನೂರ್ ಸಿಂಗ್ 28 ಎಸೆತಗಳಲ್ಲಿ 3 ಬೌಂಡರಿ ಸಹಿತ 16 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಭಾರತ ಒಂದು ಹಂತದಲ್ಲಿ 12.3 ಓವರ್ಗಳಲ್ಲಿ 37 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸುತ್ತಿತ್ತು. ಆದರೆ 3ನೇ ವಿಕೆಟ್ಗೆ ಒಂದಾದ ನಾಯಕ ಯಶ್ ಧುಲ್ ಮತ್ತು ಉಪನಾಯಕ ರಶೀದ್ ನಿಧಾನಗತಿ ಆಟಕ್ಕೆ ಮೊರೆ ಹೋಗಿ ವಿಕೆಟ್ ಉಳಿಸಿಕೊಂಡರು. 30 ಓವರ್ಗಳವರೆಗೆ ಒಂದೊಂದೆ ರನ್ಗಾಗಿ ಆಡುತ್ತಿದ್ದ ಈ ಜೋಡಿ ನಂತರ ಬೌಂಡರಿಗಳ ಮೂಲಕ ರನ್ಗತಿಯನ್ನು ಹೆಚ್ಚಿಸಿದರು.
ಯುಶ್ ಧುಲ್ ತಾವೆದುರಿಸಿದ 110 ಎಸೆತಗಳಲ್ಲಿ 110 ರನ್ ಗಳಿಸಿ ತಂಡದ ಮೊತ್ತ ಏರಿಸಿದರು. ಆದರೆ 46ನೇ ಓವರ್ನಲ್ಲಿ ರನ್ಔಟ್ ಆಗಿ ನಿರ್ಗಮಿಸಿದರು. ಯಶ್ ಔಟಾದ ನಂತರದ ಎಸೆತದಲ್ಲೇ ರಶೀದ್ ಕೂಡ ಕ್ಯಾಚ್ ಔಟ್ ಆದರು. ಅವರು 108 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 94 ರನ್ಗಳಿಸಿ 6 ರನ್ಗಳಿಂದ ಶತಕವಂಚಿತರಾಗಿ ನಿರಾಶೆ ಅನುಭವಿಸಿದರು.
ಕೊನೆಯಲ್ಲಿ ಅಬ್ಬರಿಸಿದ ವಿಕೆಟ್ ಕೀಪರ್ ದಿನಾ ಬಾನಾ ಕೇವಲ 4 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 20ರನ್, ನಿಶಾಂತ್ ಸಿಂಧು 10 ಎಸೆತಗಳಲ್ಲಿ 12, ರಾಜವರ್ಧನ್ 10 ಎಸೆತಗಳಲ್ಲಿ 13 ರನ್ ಗಳಿಸಿದರು. ಭಾರತ ತಂಡ 50 ಓವರ್ಗಳಲ್ಲಿ 5 ವಿಕೆಟ್ ಕಳೇದುಕೊಂಡು 290 ರನ್ ಗಳಿಸಿತು.
ಆಸ್ಟ್ರೇಲಿಯಾ ಪರ ಜ್ಯಾಕ್ ನಿಸ್ಬೆಟ್ 41ಕ್ಕೆ 2, ವಿಲಿಯಮ್ ಸಾಲ್ಜ್ಮನ್ 57ಕ್ಕೆ 2 ವಿಕೆಟ್ ಪಡೆದರು.
ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಭಾರತದ ವೇಗಿ ರವಿಕುಮಾರ್ ಆರಂಭಿಕ ಆಘಾತ ನೀಡಿದರು. ಆಸೀಸ್ ತಂಡದ ಮೊತ್ತ 3 ಆಗಿದ್ದಾಗ ತೇಗೂ ವೈಲ್ಲೈ (1) ವಿಕೆಟ್ ಕಬಳಿಸಿದರು. ಬಳಿಕ ಕ್ಯಾಂಪಬೆಲ್ ಕೆಲ್ಲಿ (30) ಹಾಗೂ ಕೊರೆ ಮಿಲ್ಲರ್ (38) ರನ್ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಆದ್ರೆ ತಂಡದ ಮೊತ್ತ 71 ಆಗಿದ್ದಾಗ ರಘುವಂಶಿ ಎಸೆತದಲ್ಲಿ ಮಿಲ್ಲರ್ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಹಿಂದೆಯೇ ಕ್ಯಾಂಪಬೆಲ್ ಕೂಡ ಔಟಾದರು. ಬಳಿಕ ಬಂದ ಲಚ್ಲಾನ್ ಶಾ (51) ಹೊರತು ಪಡಿಸಿ ಇನ್ನುಳಿದ ಆಟಗಾರರು ರನ್ ಗಳಿಸಲಾಗದೇ ವಿಕೆಟ್ ಒಪ್ಪಿಸಿ ಹೊರನಡೆದರು.