ಆಂಟಿಗುವಾ: ರವಿಕುಮಾರ್ ಮತ್ತು ರಾಜ್ ಭಾವಾ ಅವರ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಕಿರಿಯರ ತಂಡ 2022ರ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಂಗ್ಲರನ್ನು 189ಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಇಂಗ್ಲೆಂಡ್ U19 ತಂಡ ಜೇಮ್ಸ್ ರಿವ್ ಅವರ 95 ರನ್ಗಳ ಹೊರತಾಗಿಯೂ 44.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 189 ರನ್ಗಳಿಸಿದೆ. ರಿವ್ 116 ಎಸೆತಗಳಲ್ಲಿ 12 ಬೌಂಡರಿ ಸಹಿತ 95 ರನ್ಗಳಿಸಿದರೆ, ಉಳಿದೆಲ್ಲಾ ಬ್ಯಾಟರ್ಗಳು ಕೇವಲ 94 ರನ್ಗಳಿಸಿದರು.
91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್
ಇಂಗ್ಲೆಂಡ್ ಪರ ಆರಂಭಿರಾಗಿ ಕಣಕ್ಕಿಳಿದಿದ್ದ ಸ್ಫೋಟಕ ಬ್ಯಾಟರ್ ಜಾಕೋಬ್ ಬೆತೆಲ್(2) ಮತ್ತು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ನಾಯಕ ಟಾಮ್ ಪ್ರಿಸ್ಟ್(0)ರನ್ನು ತಂಡದ ಮೊತ್ತ 18ರನ್ಗಳಾಗುವಷ್ಟರಲ್ಲಿ ರವಿ ಕುಮಾರ್ ಪೆವಿಲಿಯನ್ಗಟ್ಟಿದರು. ನಂತರ ಬಂದ ವಿಲ್ ಲಕ್ಸ್ಟನ್(4), ಜಾರ್ಜ್ ಬೆಲ್(0),ರೆಹಾನ್ ಅಹ್ಮದ್, ಅಲೆಕ್ಸ್ ಹೊರ್ಟನ್ ತಲಾ 10 ರನ್ ನೀಡಿ ವಿಕೆಟ್ ಒಪ್ಪಿಸಿದರು. ಇದರಲ್ಲಿ 4 ವಿಕೆಟ್ ರಾಜ್ ಬಾವಾ ಪಡೆದರೆ, ಕೌಶಾಲ್ ತಾಂಬೆ ಒಂದು ವಿಕೆಟ್ ಪಡೆದಿದ್ದರು.
100 ರನ್ಗಳಿಗೆ ಆಲೌಟ್ ಆಗಬಹುದು ಎನ್ನುತ್ತಿದ್ದ ವೇಳೆ 8ನೇ ವಿಕೆಟ್ ಒಂದಾದ ಜೇಮ್ಸ್ ರಿವ್(95) ಮತ್ತು ಜೇಮ್ಸ್ ಸೇಲ್ಸ್(34) 3ನೇ ವಿಕೆಟ್ಗೆ 93 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು 180ರ ಗಢಿ ದಾಟಿಸಿದರು. ಆದರೆ ಒಂದೇ ಓವರ್ನಲ್ಲಿ ರವಿ ಕುಮಾರ್ ರಿವ್ ಮತ್ತು ಥಾಮಸ್ ಆ್ಯಸ್ಪಿನ್ವಿಲ್ ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಬೃಹತ್ ಮೊತ್ತದ ಕನಸಿಗೆ ತಣ್ಣೀರೆರಚಿದರು.
ಭಾರತದ ಪರ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ವೇಗಿಗಳಾದ ರವಿಕುಮಾರ್ 34ಕ್ಕೆ 4, ರಾಜ್ ಭಾವಾ 31ಕ್ಕೆ 5 ವಿಕೆಟ್ ಪಡೆದು ಆಂಗ್ಲರನ್ನು 200ರ ಗಡಿ ದಾಟದಂತೆ ತಡೆಯುವಲ್ಲಿ ಯಶಸ್ವಿಯಾದರು. ಕೌಶಾಲ್ ತಾಂಬೆ 29ಕ್ಕೆ 1 ವಿಕೆಟ್ ಪಡೆದರು.
ಇದನ್ನು ಓದಿ: IND vs WI ODI : ಭಾರತ ತಂಡಕ್ಕೆ ಇಬ್ಬರು ಸ್ಫೋಟಕ ಬ್ಯಾಟರ್ಗಳ ಸೇರ್ಪಡೆ