ಟ್ರಿನಿಡಾಡ್: ಕಿರಿಯರ ವಿಶ್ವಕಪ್ನಲ್ಲಿ ಭಾರತೀಯ ಯುವಪಡೆಯ ಅಬ್ಬರ ಮುಂದುವರಿದಿದ್ದು, ಶನಿವಾರ ನಡೆದ ಕ್ರಿಕೆಟ್ನಲ್ಲಿ ಈಗಷ್ಟೇ ಕಣ್ಣುಬಿಡುತ್ತಿರುವ ಉಗಾಂಡ ವಿರುದ್ಧ ಬರೋಬ್ಬರಿ 326 ರನ್ಗಳಿಂದ ಜಯ ದಾಖಲಿಸಿ ಅಜೇಯವಾಗಿ ಕ್ವಾರ್ಟರ್ ಫೈನಲ್ ತಲುಪಿದೆ.
ಬ್ರಿಯಾನ್ ಲಾರಾ ಸ್ಟ್ರೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಬರೋಬ್ಬರಿ 405 ರನ್ಗಳನ್ನು ಸೂರೆಗೈದಿತು. ಅಂಗ್ಕೃಷ್ ರಘುವಂಶಿ ಮತ್ತು ರಾಜ್ ಭಾವಾ ಬೌಂಡರಿ-ಸಿಕ್ಸರ್ಗಳ ಸುರಿಮಳೆ ಸುರಿಸಿದರು ಆರಂಭಿಕರಾಗಿ ಕಣಕ್ಕಿಳಿದಿದ್ದ ರಘುವಂಶಿ 120 ಎಸೆತಗಳಲ್ಲಿ 22 ಬೌಂಡರಿ , 4 ಸಿಕ್ಸರ್ಗಳ ಸಹಿತ 144 ರನ್ಗಳಿಸಿದರೆ, ಆಲ್ರೌಂಡರ್ ರಾಜ್ ಬಾವಾ 108 ಎಸೆತಗಳಲ್ಲಿ 14 ಬೌಂಡರಿ ಮತ್ತು 8 ಸಿಕ್ಸರ್ಗಳ ಸಹಿತ 162 ರನ್ಗಳಿಸಿದರು. ಈ ಮೂಲಕ ಕಿರಿಯರ ವಿಶ್ವಕಪ್ನಲ್ಲಿ ಗರಿಷ್ಠ ವೈಯಕ್ತಿಕ ರನ್ ಸಿಡಿಸಿದ ಭಾರತೀಯ ಎನಿಸಿಕೊಂಡರು. 2004ರಲ್ಲಿ ಶಿಖರ್ ಧವನ್ 155 ರನ್ಗಳಿಸಿದ್ದ ಈವರೆಗಿನ ದಾಖಲೆಯಾಗಿತ್ತು.
ಉಳಿದಂತೆ ನಾಯಕ ನಿಶಾಂತ್ 15, ದಿನೇಶ್ ಬಾನ 22, ಕನ್ನಡಿಗ ಅನೀಶ್ವರ್ 12, ಹರ್ನೂರ್ ಸಿಂಗ್ 15 ರನ್ಗಳಿಸಿದರು.
406 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಉಗಾಂಡವನ್ನು ಭಾರತೀಯ ಬೌಲರ್ಗಳು ಕೇವಲ 19.4 ಓವರ್ಗಳಲ್ಲಿ 70 ರನ್ಗಳಿಗೆ ಆಲೌಟ್ ಮಾಡುವ ಮೂಲಕ 326 ರನ್ ದಾಖಲೆಯ ಗೆಲುವಿಗೆ ಕಾರಣರಾದರು.