ಕರ್ನಾಟಕ

karnataka

ETV Bharat / sports

U19 womens T20 world cup: ಫೈನಲ್​ನಲ್ಲಿ ಭಾರತ - ಇಂಗ್ಲೆಂಡ್​ ಹಣಾಹಣಿ, ಪ್ರಥಮ ಕಪ್​ಗೆ ಇಂಡಿಯನ್ಸ್​ ಪಣ

ನ್ಯೂಜಿಲ್ಯಾಂಡ್​​​​ ಸೋಲಿಸಿ ಫೈನಲ್​ಗೇರಿದ ಭಾರತೀಯ ವನಿತೆಯರು - ಬದ್ಧ ವೈರಿ ಆಸ್ಟ್ರೇಲಿಯಾವನ್ನು ಮಣಿಸಿ ಅಂತಿಮ ಹಂತ ತಲುಪಿದ ಇಂಗ್ಲೆಂಡ್​ - ನಾಳೆ ಪೊಚೆಫ್‌ಸ್ಟ್ರೂಮ್​ನಲ್ಲಿ ಫೈನಲ್​​ ಪಂದ್ಯ - ಮೊದಲ ಬಾರಿಗೆ ಫೈನಲ್​ಗೇರಿದ ಭಾರತೀಯ ವನಿತೆಯರು.

u19 womens t20 world cup
ವನಿತೆಯರ 19 ವರ್ಷದೊಳಗಿನವರ ಟಿ20 ವಿಶ್ವಕಪ್‌

By

Published : Jan 28, 2023, 5:06 PM IST

ಪೊಚೆಫ್‌ಸ್ಟ್ರೂಮ್(ದಕ್ಷಿಣ ಆಫ್ರಿಕಾ): ವನಿತೆಯರ 19 ವರ್ಷದೊಳಗಿನವರ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್​ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಪಾರ್ಶ್ವಿ ಚೋಪ್ರಾ ಮತ್ತು ಶ್ವೇತಾ ಸೆಹ್ರಾವತ್ ಅವರ ಅದ್ಭುತ ಬ್ಯಾಟಿಂಗ್​ ಪ್ರದರ್ಶನದಿಂದ ನ್ಯೂಜಿಲ್ಯಾಂಡ್​​ ತಂಡವನ್ನು ಭಾರತ 8 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್​ ಮಾಡಿದ ಕಿವೀಸ್​ ವನಿತೆಯರನ್ನು 107ಕ್ಕೆ ಕಟ್ಟಿಹಾಕುವಲ್ಲಿ ಪಾರ್ಶ್ವಿ ಚೋಪ್ರಾ ಪ್ರಮುಖ ಪಾತ್ರ ವಹಿಸಿದರು. ಪಾರ್ಶ್ವಿ ಮೂರು ವಿಕೆಟ್​ ಪಡೆದು ಕಾಡಿದರೆ, ಬ್ಯಾಟಿಂಗ್​ನಲ್ಲಿ ಶ್ವೇತ 45 ಎಸೆತದಲ್ಲಿ ಅಜೇಯರಾಗಿ 61 ರನ್​ಗಳಿಸಿದರು. ಈ ಉತ್ತಮ ಪ್ರದರ್ಶನದಿಂದ 19 ವರ್ಷದೊಳಗಿನ ವನಿತೆಯರ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್‌ ಫೈನಲ್​ ಪ್ರವೇಶಿಸಿದೆ.

ಟಾಸ್​ ಗೆದ್ದು ಕ್ಷೇತ್ರ ರಕ್ಷಣೆಗೆ ಮುಂದಾದ ಶೆಫಾಲಿ ವರ್ಮಾಗೆ ಪಿಚ್​ ಸಹಕಾರ ನೀಡಿತು. ಕಿವೀಸ್​ ವನಿತೆಯರನ್ನು ಸೆಮಿಸ್​ನಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡರು. ಪಾರ್ಶ್ವಿ ಚೋಪ್ರಾ 4 ಓವರ್​ಗೆ 20 ರನ್​ ನೀಡಿ 3 ವಿಕೆಟ್​ ಪಡೆದುಕೊಂಡರು. ​ಟಿಟಾಸ್ ಸಾಧು, ಮನ್ನತ್ ಕಶ್ಯಪ್, ಶೆಫಾಲಿ ವರ್ಮಾ ಮತ್ತು ಅರ್ಚನಾ ತಲಾ ಒಂದು ವಿಕೆಟ್ ಪಡೆದರು. ಈ ಬಿರುಸಿನ ಬೌಲಿಂಗ್​ ದಾಳಿಗೆ ನಲುಗಿದ ನ್ಯೂಜಿಲ್ಯಾಂಡ್​ ವನಿತೆಯರು 20 ಓವರ್​ಗೆ 9 ವಿಕೆಟ್​ ನಷ್ಟಕ್ಕೆ 107 ರನ್​ ಗಳಿಸಿದರು.

ಆರಂಭಿಕರಾಗಿ ಕಣಕ್ಕಿಳಿದ ನಾಯಕಿ ಶೆಫಾಲಿ ವರ್ಮಾ (10) ಹೆಚ್ಚು ಹೊತ್ತು ನಿಲ್ಲಲಿಲ್ಲ. ತಂಡದ ಮೊತ್ತ 33 ಆಗಿದ್ದಾಗ ಭಾರತದ ಮೊದಲ ವಿಕೆಟ್​ ಪತನವಾಗಿತ್ತು. ನಂತರ ಬಂದ ಸೌಮ್ಯ ತಿವಾರಿ ಆರಂಭಿಕರಾಗಿ ಬಂದಿದ್ದ ಶ್ವೇತಾ ಶೆಹ್ರಾವತ್​ಗೆ ಬೆಂಬಲವಾಗಿ ನಿಂತರು. ತಂಡದ ಮೊತ್ತ 95 ಆಗಿದ್ದಾಗ, ಗೆಲುವಿಗೆ 13 ರನ್​ ಬಾಕಿ ಇದ್ದಾಗ ಸೌಮ್ಯ ತಿವಾರಿ (22) ವಿಕೆಟ್​ ಒಪ್ಪಿಸಿದರು. ಶ್ವೇತ ತಮ್ಮ ಹೋರಾಟವನ್ನು ಮುಂದುವರೆಸಿದರು 45 ಎಸೆತ ಫೇಸ್​ ಮಾಡಿದ ಅವರು 10 ಬೌಂಡರಿಯಿಂದ ಭರ್ಜರಿ 61ರನ್​ಗಳಿಸಿದರು, ಹೀಗಾಗಿ 14.2 ಓವರ್​ನಲ್ಲಿ ಭಾರತ ಎಂಟು ವಿಕೆಟ್​ಗಳ ಗೆಲುವು ಸಾಧಿಸಿ ಫೈನಲ್​​ಗೆ ಏರಿತು.

ಫೈನಲ್​ನಲ್ಲಿ ಬ್ರಿಟಿಷ್​ ಎದುರಾಳಿ:ಅತ್ತ ಆಸ್ಟ್ರೇಲಿಯಾವನ್ನು 3 ರನ್​ಗಳಿಂದ ಸೋಲಿಸಿ ಇಂಗ್ಲೆಂಡ್​ ಫೈನಲ್​ಗೆ ಲಗ್ಗೆ ಇಟ್ಟಿದೆ. 99 ರನ್​ಗೆ ಆಲ್​ ಔಟ್​ ಬ್ಯಾಟಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಇಂಗ್ಲೆಂಡ್​ ಬೌಲಿಂಗ್​ನಲ್ಲಿ ಕರಾರುವಕ್ಕು ದಾಳಿ ಮಾಡಿ ಆಸ್ಟ್ರೇಲಿಯಾವನ್ನು 96ಕ್ಕೆ ಆಲ್​ ಔಟ್​ ಮಾಡುವ ಮೂಲಕ ಚುಟುಕು ಕ್ರಿಕೆಟ್​ನ ಅಂತಿಮ ಹಂತಕ್ಕೇರಿತು. ನಾಳೆ ಭಾರತ ಮತ್ತು ಇಂಗ್ಲೆಂಡ್​ ನಡುವೆ ಪಂದ್ಯ ನಡುವೆ ಪೊಚೆಫ್‌ಸ್ಟ್ರೂಮ್​ನಲ್ಲಿ ನಡೆಯಲಿದೆ.

ಸೆಮಿಫೈನಲ್‌ನಲ್ಲಿ ಉಭಯ ತಂಡಗಳು ಅಮೋಘ ಪ್ರದರ್ಶನ ನೀಡುವ ಮೂಲಕ ಜಯ ಸಾಧಿಸಿವೆ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಫೈನಲ್ ಪಂದ್ಯ ರೋಚಕತೆಯಿಂದ ಕೂಡಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಒಂದೇ ಒಂದು ಪಂದ್ಯದಲ್ಲಿ ಸೋತು ಫೈನಲ್​ಗೇರಿದೆ. ಹಾಗಾಗಿಯೇ ಭಾರತ ತಂಡ ಇಂಗ್ಲೆಂಡ್‌ಗೆ ಭಾರಿ ಪೈಪೋಟಿ ನೀಡಬಹುದು. ಭಾರತ ತಂಡ ಇದುವರೆಗೆ ಶ್ರೀಲಂಕಾ, ಆಸ್ಟ್ರೇಲಿಯಾ, ಸ್ಕಾಟ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಸೋಲಿಸಿದೆ. ಶ್ವೇತಾ ಸೆಹ್ರಾವತ್ ಈ ಟೂರ್ನಿಯಲ್ಲಿ ಇದುವರೆಗೆ ಅತಿ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ್ತಿ. ಅವರು 6 ಪಂದ್ಯಗಳಲ್ಲಿ 192 ರನ್ ಗಳಿಸಿದ್ದಾರೆ.

ಶುಭಾಶಯ:ಫೈನಲ್​ಗೇರಿದ ಮಹಿಳಾ ಅಂಡರ್‌-19 ಟಿ20 ತಂಡಕ್ಕೆ ದೇಶದೆಲ್ಲೆಡೆಯಿಂದ ಶುಭಾಶಯಗಳು ಬರುತ್ತಿವೆ. ಈ ವಿಶೇಷ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೈನಲ್ ತಲುಪಿದ್ದಕ್ಕಾಗಿ ಎಲ್ಲಾ ಆಟಗಾರರನ್ನು ಅಭಿನಂದಿಸಿದ್ದಾರೆ. ನ್ಯೂಜಿಲ್ಯಾಂಡ್​​ ತಂಡವನ್ನು ಸೋಲಿಸಿ ಅಂಡರ್-19 ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ್ದಕ್ಕಾಗಿ ಶಫಾಲಿ ವರ್ಮಾ ನಾಯಕತ್ವದ ಭಾರತದ ಅಂಡರ್-19 ಮಹಿಳಾ ಕ್ರಿಕೆಟ್ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ. ಫೈನಲ್‌ಗೂ ಟೀಂ ಇಂಡಿಯಾಗೆ ಶುಭವಾಗಲಿ ಎಂದಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಹಾಗೂ ಗೃಹ ಸಚಿವರ ಪುತ್ರ ಜೈ ಶಾ ಕೂಡ ಟ್ವೀಟ್ ಮಾಡುವ ಮೂಲಕ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಕಿವೀಸ್​ ಸೋಲಿಸಿ ಫೈನಲ್​ಗೇರಿದ ನಮ್ಮ ಯುವತಿಯರಿಗೆ ಶುಭಾಶಯ, ವನಿತೆಯರ 19 ವರ್ಷದೊಳಗಿನವರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ. ಫೈನಲ್​ಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಬಾರ್ಡರ್ ಗವಾಸ್ಕರ್ ಟ್ರೋಫಿ: ಮೊದಲ ಪಂದ್ಯದ ಟಿಕೆಟ್‌ಗಳ ಬುಕ್ಕಿಂಗ್​ ಶೀಘ್ರದಲ್ಲೇ ಪ್ರಾರಂಭ

ABOUT THE AUTHOR

...view details