ನವದೆಹಲಿ: ಕೋವಿಡ್ 19 ಏರಿಕೆಯಾಗುತ್ತಿರುವ ಕಾರಣ ಕೆಲವು ಐಪಿಎಲ್ ಬಿಟ್ಟು ತವರಿಗೆ ಮರಳಿರುವ ಆಸ್ಟ್ರೇಲಿಯಾದ ವೇಗಿ ಆ್ಯಂಡ್ರ್ಯೂ ಟೈ ದೇಶದಲ್ಲಿ ಕೊರೊನಾ ಏರುತ್ತಿದ್ದರೂ ಮಿಲಿಯನ್ಗಟ್ಟಲೇ ಹಣವನ್ನು ವಿನಿಯೋಗಿಸಿ ಹೇಗೆ ನಡೆಸುತ್ತಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ಮತ್ತು ಸರ್ಕಾರವನ್ನು ಟೀಕಿಸಿದ್ದಾರೆ.
ಕಳೆದ ಒಂದು ವಾರದಿಂದ ದೇಶದಲ್ಲಿ ಪ್ರತಿದಿನ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಕಾರಣದಿಂದ ಕೆಲವು ದೇಶಗಳು ಭಾರತದಿಂದ ವಿಮಾನಯಾನವನ್ನು ನಿಷೇಧಿಸಿವೆ. ಆಸ್ಟ್ರೇಲಿಯಾ ಕೂಡ ನಿಷೇಧಿಸಲು ಮುಂದಾಗಿರುವುದರಿಂದ ಕೆಲವು ಆಸ್ಟ್ರೇಲಿಯಾ ಆಟಗಾರರು ತವರಿಗೆ ಮರಳಿದ್ದಾರೆ.
ನಿನ್ನೆ ಆ್ಯಂಡ್ರ್ಯೂ ಟೈ ರಾಜಸ್ಥಾನ್ ತಂಡವನ್ನು ತೊರೆದರೆ, ಇಂದು ಆರ್ಸಿಬಿಯ ಜಂಪಾ ಮತ್ತು ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣ ನೀಡಿ ಹೊರ ಹೋಗಿದ್ದಾರೆ. ಆಟಗಾರರ ಸುರಕ್ಷತಾ ದೃಷ್ಟಿಕೋನದಿಂದ, ನಾವು ಈಗ ಸುರಕ್ಷಿತವಾಗಿದ್ದೇವೆ, ಆದರೆ, ಅದು ಸುರಕ್ಷಿತವಾಗಿ ಹೋಗುತ್ತಿದೆಯೇ? ಎಂದು cricket.com.au.ಗೆ ನೀಡಿದ ಸಂದರ್ಶನದಲ್ಲಿ ಟೈ ಹೇಳಿದ್ದಾರೆ.
"ಭಾರತದಲ್ಲಿ ಜನರು ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವಾಗ ಫ್ರಾಂಚೈಸಿಗಳು ಮತ್ತು ಸರ್ಕಾರಗಳು ಹೇಗೆ ಐಪಿಎಲ್‌ಗೆ ಇಷ್ಟೊಂದು ಹಣವನ್ನು ಖರ್ಚು ಮಾಡುತ್ತಿವೆ?" ಎಂದು ಟೈ ಐಪಿಎಲ್ ಆಯೋಜಕರ ನಡೆಯನ್ನು ಪ್ರಶ್ನಿಸಿದ್ದಾರೆ.
ಆದರೆ, ಭಾರತದಲ್ಲಿ ಐಪಿಎಲ್ ಈ ಸಂಕಷ್ಟದ ಸಮಯದಲ್ಲೂ ಜನರಿಗೆ ಸ್ವಲ್ಪ ಖುಷಿ ತರಲಿದೆ. ಕ್ರೀಡೆಯು ಮುಂದುವರಿದು ಒತ್ತಡ ನಿವಾರಿಸಲು ನೆರವಾಗಲಿದೆ ಎಂದರೆ ಅದು ಮುಂದುವರಿಯಬೇಕೆಂದು ನಾನು ಭಾವಿಸುತ್ತೇನೆ. ಆದರೆ, ಎಲ್ಲರ ಭಾವನೆಗಳು ಒಂದೇ ರೀತಿಯಲ್ಲಿರುವುದಿಲ್ಲ, ನಾನು ಎಲ್ಲರ ದೃಷ್ಟಿಕೋನಗಳಿಂದ ಎಲ್ಲರ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ.