ಶಾರ್ಜಾ :ಐಪಿಎಲ್ನಲ್ಲಿ ಕಳಪೆ ಅಂಪೈರಿಂಗ್ ವಿರುದ್ಧ ಟೀಕೆ ಮುಂದುವರಿದಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟರ್ ದೇವದತ್ ಪಡಿಕ್ಕಲ್ ಅವರ ಗ್ಲೌಸ್ಗೆ ಚೆಂಡು ತಾಗಿದರೂ 3ನೇ ಅಂಪೈರ್ ನಾಟೌಟ್ ತೀರ್ಪು ನೀಡಿದ್ದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆರ್ಸಿಬಿ ಇನ್ನಿಂಗ್ಸ್ ವೇಳೆ ರವಿ ಬಿಷ್ಣೋಯ್ ಎಸೆದ 7ನೇ ಓವರ್ನ 3ನೇ ಎಸೆತ ವಿಕೆಟ್ ಕೀಪರ್ ರಾಹುಲ್ ಕೈಸೇರಿತು. ಬ್ಯಾಟ್ಗೆ ತಾಗಿದ ಶಬ್ಧ ಕೇಳಿ ಬಂದಿದ್ದರಿಂದ ರಾಹುಲ್ ಆತ್ಮವಿಶ್ವಾಸದಿಂದ ಮೈದಾನದ ಅಂಪೈರ್ ಔಟ್ ನೀಡದಿದ್ದರೂ ರಿವ್ಯೂವ್ ತೆಗೆದುಕೊಂಡರು.
ಟಿವಿ ರಿಪ್ಲೇಯಲ್ಲಿ ಚೆಂಡು ದೇವದತ್ ಪಡಿಕ್ಕಲ್ ಗ್ಲೌಸ್ಗೆ ತಾಗಿರುವುದು ಅಲ್ಟ್ರಾಎಡ್ಜ್ನಲ್ಲಿ ಖಚಿತವಾಗಿ ಕಂಡು ಬಂದಿತು. ಆದರೆ, 3ನೇ ಅಂಪೈರ್ ಕೆ ಶ್ರೀನಿವಾಸನ್ ಚೆಂಡು ಬ್ಯಾಟ್ಗೆ ತಾಗಿಲ್ಲ ಎಂದು ನಾಟೌಟ್ ತೀರ್ಪು ನೀಡಿದರು. ಈ ತೀರ್ಪಿನಿಂದ ರಾಹುಲ್ ದಿಗ್ಭ್ರಾಂತರಾದರು. ಮೈದಾನದ ಅಂಪೈರ್ ಜೊತೆಗೆ ಮತ್ತೊಮ್ಮೆ ಮಾತುಕತೆಗೆ ಮುಂದಾದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಪಡಿಕ್ಕಲ್ 40 ರನ್ಗಳಿಸಿ ಔಟಾದರು.