ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20I ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ಚೆಂದದ ಬ್ಯಾಟಿಂಗ್ ಮೂಲಕ ಕ್ರೀಡಾಭಿಮಾನಿಗಳಲ್ಲಿ ಪುಳಕ ಉಂಟು ಮಾಡಿದ್ದಾರೆ. ಇನ್ನೇನು ಗೆದ್ದೇ ಬಿಟ್ವಿ ಎನ್ನುವಷ್ಟರಲ್ಲಿ ಪಂದ್ಯದ ಫಲಿತಾಂಶವೇ ಬದಲಾಗಿತ್ತು. ಆದ್ರೆ, ಆಂಗ್ಲರೆದುರು ಭಾರತ ಗೆಲ್ಲಿಸಲು ಏಕಾಂಗಿಯಾಗಿ ಹೋರಾಡಿದ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಶೈಲಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಮಾಜಿ ಸ್ಫೋಟಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಪ್ರತಿಕ್ರಿಯಿಸಿ, ವಾವ್ ಸ್ಕೈ! ಸೂರ್ಯ ಪ್ರಖರವಾಗಿ ಹೊಳೆಯುತ್ತಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಸಂಕ್ಷಿಪ್ತ ಮಾಹಿತಿ: ಇಂಗ್ಲೆಂಡ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 215 ರನ್ಗಳನ್ನು ಕಲೆ ಹಾಕುವ ಮೂಲಕ ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಿತು. ಡೇವಿಡ್ ಮಲಾನ್ 77 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದರೆ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ 42 ರನ್ ಗಳಿಸಿ ಅಜೇಯರಾಗುಳಿದರು.
216 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ ಒಂದೆಡೆ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತು. ಆದ್ರೆ ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಮಾತ್ರ ಒನ್ ಮ್ಯಾನ್ ಆರ್ಮಿ ಪ್ರದರ್ಶನ ತೋರುತ್ತಿದ್ದರು. ಸೂರ್ಯಕುಮಾರ್ ಕೇವಲ 55 ಎಸೆತಗಳಲ್ಲಿ 117 ರನ್ ಭರ್ಜರಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುತ್ತಿದ್ದರು. ಆದ್ರೆ 18.5 ಓವರ್ನ ಮೊಯಿನ್ ಅಲಿ ಎಸೆತದಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿದ್ರು. ಬಳಿಕ ಬಂದ ಬ್ಯಾಟರ್‌ಗಳು ತಂಡವನ್ನು ಗುರಿ ತಲುಪಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಭಾರತ ತಂಡ ನಿಗದಿತ 20 ಓವರ್ಗಳಿಗೆ 198/9 ರನ್ಗಳನ್ನು ಕಲೆ ಹಾಕಿ ಇಂಗ್ಲೆಂಡ್ ವಿರುದ್ಧ ಸೋಲೊಪ್ಪಿಕೊಂಡಿತು. ಇನ್ನು ಪಂದ್ಯ ವೀಕ್ಷಿಸಿ ಖುಷ್ ಆಗಿರುವ ಸಚಿನ್ ತೆಂಡೂಲ್ಕರ್, 'ಇದು ಶೇ 100ರಷ್ಟು ಅಚ್ಚರಿ' ಎಂದು ಟ್ವೀಟ್ ಮಾಡಿದ್ದಾರೆ.