ಇದೇ ಭಾನುವಾರ ಭಾರತ-ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಟಿ20 ಕ್ರಿಕೆಟ್ ಪಂದ್ಯ ನಡೆಯಲಿದೆ. ಏಷ್ಯಾ ಕಪ್ನಲ್ಲಿ ಭಾರತವು ಪಾಕಿಸ್ತಾನದೆದುರು ಸೋಲನುಭವಿಸಿತ್ತು. ವಿಶ್ವಕಪ್ನ ಈ ಪಂದ್ಯದಲ್ಲಿ ಸೋಲಿನ ಸೇಡು ತೀರಿಸಿಕೊಳ್ಳಲು ಬ್ಲೂ ಬಾಯ್ಸ್ ರೆಡಿಯಾಗಿದ್ದಾರೆ.
ದಾಖಲೆಗಳ ಪ್ರಕಾರ, ವಿನ್ನಿಂಗ್ ಫೇವರೆಟ್ ಟೀಂ ಭಾರತವೇ. ಆದರೂ ಪಾಕಿಸ್ತಾನದ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಹಣಾಹಣಿ ತೀವ್ರ ಕುತೂಹಲ ಕೆರಳಿಸಿದೆ. ಭಾನುವಾರದ ಪಂದ್ಯಕ್ಕೂ ಮುನ್ನ ಇಂಡೋ-ಪಾಕ್ನ ಅವಿಸ್ಮರಣೀಯ ಆರು ಪಂದ್ಯಗಳ ಒಂದು ಮೆಲುಕು ಇಲ್ಲಿದೆ.
1. ಬಾಲ್ ಔಟ್ ಮೂಲಕ ಗೆಲುವು: 2007ರಲ್ಲಿ ಟೈ ಆದ ಪಂದ್ಯವನ್ನು ಭಾರತ ಬಾಲ್ ಔಟ್ ಮುಖಾಂತರ ಗೆದ್ದುಕೊಂಡಿತ್ತು. ಮೊದಲ ಟಿ20 ವಿಶ್ವಕಪ್‌ನಲ್ಲಿ ಸೂಪರ್ ಓವರ್ನ ಪರಿಚಯ ಆಗಿರಲಿಲ್ಲ. ಪಂದ್ಯ ಟೈ ಆದಾಗ ಒಂದು ಓವರ್ಗಳ ಬಾಲ್ಔಟ್ ಆಡಿಸಲಾಗುತ್ತಿತ್ತು.
2. 2007 ವಿಶ್ವಕಪ್ ಫೈನಲ್ ಮ್ಯಾಚ್:ಫೈನಲ್ ಪಂದ್ಯದಲ್ಲಿ ಧೋನಿಯ ಚಾಣಾಕ್ಷ ಫೀಲ್ಡ್ ಸೆಟ್ ಮತ್ತು ಮೈದಾನದಲ್ಲಿ ಮಾಡಿದ ಕೊನೆ ಕ್ಷಣದ ಬದಲಾವಣೆಗೆ ಕ್ರಿಕೆಟ್ ದಿಗ್ಗಜರೇ ಬೆರಗಾಗಿದ್ದರು. ಗೌತಮ್ ಗಂಭಿರ್ ಅವರು ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಪಾಕಿಸ್ತಾನಕ್ಕೆ 158 ರನ್‌ಗಳ ಗುರಿಯನ್ನು ಭಾರತ ನೀಡಿತ್ತು. ಭಾರತ ಬೌಲಿಂಗ್ನಲ್ಲಿ ಇರ್ಫಾನ್ ಪಠಾಣ್ 16ಕ್ಕೆ ಮೂರು ವಿಕೆಟ್ ಪಡೆಯುವ ಮುಲಕ ಅದ್ಭುತ ಸ್ಪೆಲ್ ಮಾಡಿದ್ದರು. ಆದರೆ ಮಿಸ್ಬಾ ಉಲ್ ಹಕ್ ಮತ್ತೊಂದು ಬದಿಯಲ್ಲಿ ತಂಡದ ಗೆಲುವಿಗೆ ಪ್ರಯತ್ನಿಸುತ್ತಿದ್ದರು.
ಈ ಪಂದ್ಯದ ಆರಂಭದಲ್ಲಿ ಜೋಗಿಂದರ್ ದುಬಾರಿಯಾಗಿದ್ದೂ ಅಲ್ಲದೇ ವಿಕೆಟ್ ಕೂಡ ಪಡೆದಿರಲಿಲ್ಲ. ಕೊನೆಯ ಓವರ್ನಲ್ಲಿ ಸೀಮಿತ ರನ್ ಇದ್ದಾಗ ಮತ್ತೆ ಜೋಗಿಂದರ್ ಕೈಗೆ ಧೋನಿ ಬಾಲ್ ನೀಡಿದಾಗ ಕ್ರಿಕೆಟ್ ಪ್ರೇಮಿಗಳು ಕ್ಯಾಪ್ಟನ್ ಕೂಲ್‌ರನ್ನು ಮನಬಂದಂತೆ ಬೈದಿದ್ದರು. ಅಚ್ಚರಿ ಎಂಬಂತೆ ಕೊನೆಯ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಜೋಗಿಂದರ್ ಮೆಚ್ಚುಗೆ ಗಳಿಸಿದ್ದರು. ಅಲ್ಲದೇ ಕೊನೆಯ ಬಾಲ್ಗೆ 6ರನ್ ಬೇಕಿದ್ದಾಗ, ವಿಕೆಟ್ ಕೀಪರ್ ಹಿಂದೆ ಶ್ರೀಶಾಂತ್‌ರನ್ನು ನಿಲ್ಲಿಸಿದ್ದ ಧೋನಿ, ಕ್ಯಾಚ್ ಬಗ್ಗೆ ಪೂರ್ವ ನಿರ್ಧಾರ ಮಾಡಿದ್ದರು. ಈ ಫೀಲ್ಡಿಂಗ್ ಬದಲಾವಣೆ ಅಚ್ಚರಿಗೆ ಕಾರಣವಾಗಿತ್ತು. ಈ ಮೂಲಕ ಭಾರತ ಐದು ರನ್ನಿಂದ ಗೆದ್ದು ಚೊಚ್ಚಲ ವಿಶ್ವಕಪ್ ಮಡಿಲಿಗೆ ಹಾಕಿಕೊಂಡಿತ್ತು.
3. 2012ರಲ್ಲಿ 8 ವಿಕೆಟ್‌ಗಳಿಂದ ರೋಚಕ ಗೆಲುವು: ಭಾರತ ಈ ಪಂದ್ಯವನ್ನು ವಿರಾಟ್ ಕೊಹ್ಲಿ ಅವರ ಒನ್ ಮ್ಯಾನ್ ಶೋನಿಂದ ಗೆದ್ದುಕೊಂಡಿತ್ತು. ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ವಿಕೆಟ್ ನಂತರ ಏಕಾಂಗಿ ಆಟಕ್ಕೆ ಮುಂದಾದ ಕೊಹ್ಲಿ ಅಗ್ರೆಸಿವ್ ಆಗಿ ಆಡುತ್ತಾ 78 ರನ್ ಗಳಿಸಿ ತಂಡಕ್ಕೆ ವಿಜಯ ತಂದಿಟ್ಟಿದ್ದರು.
4. 2014ರಲ್ಲಿ 7 ವಿಕೆಟ್‌ಗಳಿಂದ ಗೆಲುವು:ಪಾಕ್ ತಂಡ ಉಮರ್ ಅಕ್ಮಲ್ ಅವರ 33 ರನ್‌ಗಳ ಸಹಾಯದಿಂದ ಭಾರತಕ್ಕೆ 130 ರನ್ ಗಳ ಗುರಿ ನೀಡಿತ್ತು. ಭಾರತ ಈ ಗುರಿಯನ್ನು ವಿರಾಟ್ 36 ರನ್, ಶಿಖರ್ ಧವನ್ ಮತ್ತು ಸುರೇಶ್ ರೈನಾರ 30 ಮತ್ತು 35 ರನ್ ಕೊಡುಗೆಯಿಂದ ಏಳು ವಿಕೆಟ್‌ಗಳಿಂದ ಗೆದ್ದಿತ್ತು.
5. 2016ರಲ್ಲಿ ಕೊಹ್ಲಿಯ ವಿರಾಟ್ ಪ್ರದರ್ಶನ:ಈಪಂದ್ಯವನ್ನು ಮಳೆಯ ಪರಿಣಾಮ 18 ಓವರ್‌ಗಳಿಗೆ ಕಡಿತಗೊಳಿಸಲಾಗಿತ್ತು. ಶೋಯೆಬ್ ಮಲಿಕ್ 26 ರನ್ ಗಳಿಸಿ ಅತ್ಯಧಿಕ ಸ್ಕೋರರ್ ಆಗಿದ್ದರೆ, ಉಳಿದಂತೆ ಉಮರ್ ಅಕ್ಮಲ್ ಮತ್ತು ಅಹ್ಮದ್ ಶೆಹಜಾದ್ ಮಾತ್ರ 20 ರನ್‌ಗಳಿಸಿ ಪಾಕಿಸ್ತಾನ 5 ವಿಕೆಟ್‌ಗಳ ನಷ್ಟಕ್ಕೆ 118 ರನ್‌ಗಳ ಸಾಧಾರಣ ಗುರಿ ನೀಡಿತ್ತು. ರೋಹಿತ್ ಶರ್ಮಾ (11ಕ್ಕೆ 10) ಮತ್ತು ಶಿಖರ್ ಧವನ್ (15ಕ್ಕೆ 6) ಬೇಗ ವಿಕೆಟ್ ಒಪ್ಪಿಸಿದ್ದರು. ಇದರಿಂದ ಭಾರತ ಆರಂಭಿಕ ಕುಸಿತ ಕಂಡಿತ್ತು. ಆದರೆ ವಿರಾಟ್ ಕೊಹ್ಲಿ 37 ಎಸೆತದಲ್ಲಿ 55 ರನ್ ಗಳಿಸಿದ್ದರಿಂದ ಭಾರತ 13 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ಗೆಲುವು ಪಡೆಯಿತು. ಈ ಅವಿಸ್ಮರಣೀಯ ಆಟದ ನಂತರ ವಿರಾಟ್ ಸ್ಟ್ಯಾಂಡ್‌ನಲ್ಲಿದ್ದ ಸಚಿನ್ ತೆಂಡೂಲ್ಕರ್‌ಗೆ ನಮಿಸಿದ್ದರು.
6. 2021ರಲ್ಲಿ ಭಾರತದೆದುರು ಗೆದ್ದ ಪಾಕ್:ಭಾರತ ಬ್ಯಾಟಿಂಗ್ ವೈಫಲ್ಯ ಕಂಡಿತಾದರೂ ವಿರಾಟ್ ಅವರ ಅರ್ಧ ಶತಕ ಮತ್ತು ಪಂತ್ ಅವರ 39 ರನ್ ಬಲದಿಂದ 151 ರನ್‌ಗಳ ಉತ್ತಮ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತ್ತು. ಆದರೆ ಬಾಬರ್ ಅಜಮ್ 68 ರನ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಅಜೇಯ 79 ರನ್ ಕೊಡುಗೆ ಪಾಕಿಸ್ತಾನಕ್ಕೆ 10 ವಿಕೆಟ್‌ಗಳ ಗೆಲುವು ದೊರಕಿಸಿತ್ತು.
ಇಂಡೋ ಪಾಕ್ ಹೆಡ್ ಟು ಹೆಡ್:ಭಾರತ ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಭಾರತ 4 ಪಂದ್ಯ ಗೆದ್ದಿದೆ. ಪಾಕಿಸ್ತಾನ 1 ಪಂದ್ಯದಲ್ಲಿ ಜಯಗಳಿಸಿದೆ. ಮೊದಲ ಪಂದ್ಯ ಟೈ ಆಗಿ ಬೌಲ್-ಔಟ್ ಗೆಲುವು ಸಾಧಿಸಿತ್ತು.
ಇದನ್ನೂ ಓದಿ:ಈವರೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡ ಕ್ರಿಕೆಟಿಗರಿವರು..