ಹೈದರಾಬಾದ್: ಟೋಕಿಯೊ ಒಲಿಂಪಿಕ್ಸ್‌ನ ಮೂರನೇ ದಿನ ಭಾರತ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಪದಕ ಪಡೆಯುವ ಭಾರಿ ಭರವಸೆ ಮೂಡಿಸಿದ್ದ ಖ್ಯಾತ ಶೂಟರ್ಗಳಾದ ಮನು ಭಾಕರ್, ದಿವ್ಯಾನ್ಶ್ ಸಿಂಗ್ ಪನ್ವಾರ್, ಯಶಸ್ವಿನಿ ದೇಸ್ವಾಲ್ ಮತ್ತು ದೀಪಕ್ ಕುಮಾರ್ ಪದವಿರಲಿ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಸದ್ಯಕ್ಕೆ ಮೀರಾಬಾಯಿ ಚನು ಪಡೆದಿರುವ ಬೆಳ್ಳಿ ಪದಕ ಭಾರತದ ಪಾಲಿನ ಏಕೈಕ ಪದಕವಾಗಿದೆ.
ಪುರುಷರ ಹಾಕಿ ತಂಡವು ಆಸ್ಟ್ರೇಲಿಯಾ ವಿರುದ್ಧ 7-1 ಗೋಲುಗಳಿಂದ ಹೀನಾಯ ಸೋಲನುಭವಿಸಿದೆ. ಆದರೆ, ಮೇರಿ ಕೋಮ್ ಮತ್ತು ಮನಿಕಾ ಬಾತ್ರಾ ಅವರ ಇಂದಿನ ಗೆಲುವುಗಳು ಮತ್ತು ರೋವರ್‌ಗಳಾದ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಸೆಮಿಫೈನಲ್‌ಗೆ ಅರ್ಹತೆ ಪಡೆದಿರುವುದು ಭಾರತ ಭಾನುವಾರ ಪಡೆದ ಸಂಭ್ರಮದ ಕ್ಷಣಗಳಾಗಿವೆ.
ಆದರೆ 2020ರ ಟೋಕಿಯೊ ಒಲಿಂಪಿಕ್ಸ್‌ನ ನಾಲ್ಕನೇ ದಿನವಾದ ಜುಲೈ 26 ರಂದು ಕೆಲವು ಇವೆಂಟ್ಗಳಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದಾರೆ. ಇವರಲ್ಲಿ ಗಮನಹರಿಸಬೇಕಾದ ಕ್ರೀಡಾಪಟುಗಳು ಮತ್ತು ತಂಡದ ಮಾಹಿತಿ ಇಲ್ಲಿದೆ.
ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ - ಬ್ಯಾಡ್ಮಿಂಟನ್
ವಿಶ್ವದ 3 ನೇ ಕ್ರಮಾಂಕದ ಚೀನಾ ತೈಪೆ ಜೋಡಿ ಲಿ ಯಾಂಗ್ ಮತ್ತು ವಾಂಗ್ ಚಿ-ಲಿನ್ ವಿರುದ್ಧದ ರೋಮಾಂಚಕ ಗೆಲುವಿನ ದಾಖಲಿಸಿರುವ ಸಾತ್ವಿಕ್ ಮತ್ತು ಚಿರಾಗ್ ಸೋಮವಾರ ಮತ್ತೊಂದು ಕಠಿಣ ಸವಾಲನ್ನು ಎದುರಿಸಲಿದ್ದಾರೆ. ವಿಶ್ವದ 10 ನೇ ಶ್ರೇಯಾಂಕದ ಭಾರತೀಯ ಜೋಡಿ ಇಂಡೋನೇಷ್ಯಾದ ಸವಾಲನ್ನು ಎದುರಿಸಲಿದೆ.
ಸುತೀರ್ಥ ಮುಖರ್ಜಿ - ಟೇಬಲ್ ಟೆನಿಸ್
ತಮ್ಮ ಚೊಚ್ಚಲ ಒಲಿಂಪಿಕ್ ಪಂದ್ಯದಲ್ಲಿ ಏಳು ಗೇಮ್ಗಳ ರೋಚಕ ಸ್ಪರ್ಧೆಯಲ್ಲಿ ಸ್ವೀಡನ್‌ನ 80 ನೇ ಶ್ರೇಯಾಂಕದ ಲಿಂಡಾ ಬರ್ಗ್ಸ್ಟಾರ್ಮ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದಾರೆ. ಅವರು ಸೋಮವಾರ 55 ನೇ ಸ್ಥಾನದಲ್ಲಿರುವ ಪೋರ್ಚುಗಲ್‌ನ ಚೀನಾ ಮೂಲದ ಪ್ಯಾಡ್ಲರ್ ಫೂ ಯು ವಿರುದ್ಧ ಕಣಕ್ಕಿಳಿಯಲಿದ್ದಾರೆ.