ನವದೆಹಲಿ :ಇಂದಿನಿಂದಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಾದ ಬಳಿಕ ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ -20 ಸರಣಿ ನಡೆಯಲಿದೆ. ಈ ಟೂರ್ನಿ ಆಗಸ್ಟ್ 3 ರಿಂದ ಆರಂಭವಾಗಲಿದೆ. ಇದಕ್ಕಾಗಿ ಭಾರತ ತಂಡದ ಆಟಗಾರರು ಕೂಡ ಸಜ್ಜಾಗಿದ್ದಾರೆ. ಈ ನಡುವೆ ಟಿ - 20 ಸರಣಿಯಲ್ಲಿ ಕಣಕ್ಕಿಳಿಯುವ ಉತ್ಸಾಹದಲ್ಲಿ ಯುವ ಬ್ಯಾಟ್ಸ್ ಮನ್ ತಿಲಕ್ ವರ್ಮಾ ಅವರು ಜುಲೈ 27 ರಂದು ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ 20 ವರ್ಷದ ಎಡಗೈ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಕಳೆದ ಎರಡು ವರ್ಷಗಳಿಂದ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ತಿಲಕ್‌ಗೆ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಅವಕಾಶ ಸಿಕ್ಕರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಸುವರ್ಣ ಅವಕಾಶ ಸಿಕ್ಕಂತೆ ಆಗುತ್ತದೆ. ಈವರೆಗೆ ಐಪಿಎಲ್‌ನಲ್ಲಿ ತಿಲಕ್ 25 ಪಂದ್ಯಗಳನ್ನಾಡಿದ್ದು, 38.95 ರ ಸರಾಸರಿಯಲ್ಲಿ 740 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕಗಳು ಕೂಡ ದಾಖಲಾಗಿವೆ.
ಟ್ರಿನಿಡಾಡ್‌ನಲ್ಲಿ ಆಗಸ್ಟ್ 3ರಿಂದ ಆರಂಭವಾಗಲಿರುವ ಟಿ-20 ಸರಣಿಯಿಂದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತೊಮ್ಮೆ ತಂಡದಿಂದ ಹೊರಗುಳಿದಿದ್ದಾರೆ. ಅದಕ್ಕಾಗಿ ಐಪಿಎಲ್ ನಲ್ಲಿ ಯಶಸ್ವಿ ನಾಯಕನಾಗಿ ಗುಜರಾತ್ ಟೈಟಾನ್ಸ್ ಒಂದು ಬಾರಿ ಫೈನಲ್ಗೆ ಕರೆದುಕೊಂಡ ಹೋದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಲಾಗಿದೆ. ಹಾಗೂ ತಂಡದಲ್ಲಿ ಬಹುತೇಕ ಯುವ ಆಟಗಾರರಿದ್ದು, ತಿಲಕ್ ವರ್ಮಾ ಒಬ್ಬರು.